ಕರ್ನಾಟಕದ ಜನತೆಗಾಗಿ ಉಚಿತ ಪಂಚ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಒಂದೊಂದೆ ಯೋಜನೆಗೆ ಪುನರ್ ಪರಿಶೀಲನೆ, ಪರಿಷ್ಕರಣೆಗೆ ಮುಂದಾಗಿದೆ. ಅನರ್ಹರನ್ನು ಪಟ್ಟಿಯಿಂದ ಕೈ ಬಿಡಲು ನಿರ್ಧರಿಸಿರುವ ಸರ್ಕಾರ ನಡೆಯನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು 2028ರ ಚುನಾವಣಾ ದೃಷ್ಟಿಯಿಂದ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆ 2000 ರೂಪಾಯಿ ಮಾಸಿಕ ಹಣ ಪಡೆಯಲು ಪುನರ್ ಅರ್ಜಿ ಸಲ್ಲಿಸಬೇಕೆಂದು ತಿಳಿಸಿತ್ತು. ಇದರಲ್ಲಿ ಅನರ್ಹರನ್ನು ಕೈ ಬಿಡುವುದಾಗಿ ಹೇಳಿತ್ತು. ನಂತರ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ದಾಖಲಾತಿ ಪುನರ್ ಪರಿಶೀಲನೆಗೆ ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿಯವರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಮನೆ ಮನೆ ಭೇಟಿಗಳು ನಡೆಯುತ್ತಿವೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಮುಂದಿನ 2028ರ ವಿಧಾನಸಭಾ ಚುನಾವಣೆ ಜನರ ದತ್ತಾಂಶಗಳನ್ನು ಸಂಗ್ರಹಿಸಲು ಸರ್ಕಾರ ಇದೆಲ್ಲ ಮಾಡುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನಿಂದ ಸರ್ಕಾರಿ ಅಧಿಕಾರಿಗಳ ದುರ್ಬಳಕೆ
ಬೆಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣೆ ರಣತಂತ್ರ ರೂಪಿಸುತ್ತಿದೆ. ಚುನಾವಣೆಗೂ ಮುನ್ನ ದತ್ತಾಂಶ ಸಂಗ್ರಹಣೆಗೆ ಮಾಹಿತಿ ಬೇಕು. ಅದಕ್ಕಾಗಿ ಹಣ ಖರ್ಚು ಮಾಡದೇ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಈ ರೀತಿಯಾಗಿ ಬಳಕೆ ಮಾಡಿಕೊಳ್ಳುತ್ತದೆ ಎಂದು ದೂರಿದರು.









