ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿರುದ್ಧ ಕೇಳಿಬರುತ್ತಿರುವ ನೇಮಕಾತಿ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಕೆಪಿಎಸ್‌ಸಿಗೆ ಸಂಬಂಧಿಸಿದಂತೆ ಆರು ಪ್ರಮುಖ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದು, ಇತ್ತೀಚಿನ ಬೆಳವಣಿಗೆಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ವಿಶ್ವಾಸಕ್ಕೆ ಧಕ್ಕೆ ತಂದಿವೆ ಎಂದು ಹೇಳಿದ್ದಾರೆ.
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿರುವುದು ರಾಜ್ಯದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ ಎಂದು ಕರವೇ ಆರೋಪಿಸಿದೆ. ಈ ಪ್ರಕರಣದಲ್ಲಿ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯುವುದು ಅತ್ಯಗತ್ಯ ಎಂದು ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ ಕೇವಲ ಇಲಾಖಾ ಮಟ್ಟದ ಅಥವಾ ಸೀಮಿತ ತನಿಖೆಯಿಂದ ಸತ್ಯ ಹೊರಬರುವುದಿಲ್ಲ ಎಂದು ಹೇಳಿರುವ ಕರ್ನಾಟಕ ರಕ್ಷಣಾ ವೇದಿಕೆ, ಕೆಪಿಎಸ್‌ಸಿಯ ಎಲ್ಲಾ ನೇಮಕಾತಿ ಅಕ್ರಮಗಳ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ. ಇದರಿಂದ ಮಾತ್ರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.









