ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹೆಣ್ಣು ಜಿರಾಫೆ ಗೌರಿಗೆ ಸೂಕ್ತ ಗಂಡು ಸಂಗಾತಿಯನ್ನು ಕರೆತರಲು ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ (ZAK) ಸಿದ್ಧತೆ ನಡೆಸಿವೆ. ವಿಶೇಷವೆಂದರೆ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಹಲವು ಜಿರಾಫೆಗಳಿದ್ದರೂ ಗೌರಿಗೆ ಸಂಗಾತಿಯನ್ನು ಅಮೆರಿಕ ಅಥವಾ ಏಷ್ಯಾದ ಇತರ ದೇಶಗಳಿಂದ ಕರೆತರಲು ಸರ್ಕಾರ ಮುಂದಾಗಿದೆ.
ಮೈಸೂರು ಮೃಗಾಲಯದಲ್ಲೇ ಜಿರಾಫೆಗಳಿರುವಾಗ ವಿದೇಶದಿಂದ ಸಂಗಾತಿಯನ್ನು ಏಕೆ ತರಬೇಕು ಎಂಬ ಕುತೂಹಲ ಪ್ರಾಣಿಪ್ರಿಯರಲ್ಲಿ ಮೂಡಿದೆ. ಇದಕ್ಕೆ ಪ್ರಮುಖ ಕಾರಣ ಅನುವಂಶಿಕ ವೈವಿಧ್ಯತೆಯನ್ನು ಕಾಪಾಡುವುದು. ಗೌರಿ ಮೂಲತಃ ಮೈಸೂರು ಮೃಗಾಲಯದಲ್ಲೇ ಜನಿಸಿದ್ದು, ಅಲ್ಲಿನ ಬಹುತೇಕ ಜಿರಾಫೆಗಳು ಒಂದೇ ವಂಶಾವಳಿಗೆ ಸೇರಿರುವುದರಿಂದ ಅವುಗಳೊಂದಿಗೆ ಸಂತಾನೋತ್ಪತ್ತಿ ಮಾಡಿಸುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ.
ಒಂದೇ ವಂಶಾವಳಿಗೆ ಸೇರಿದ ಪ್ರಾಣಿಗಳ ನಡುವೆ ಸಂತಾನೋತ್ಪತ್ತಿ ನಡೆದರೆ ಇನ್‌ಬ್ರೀಡಿಂಗ್ ಸಮಸ್ಯೆ ಎದುರಾಗಬಹುದು. ಇದರಿಂದ ಜನಿಸುವ ಮರಿಗಳಲ್ಲಿ ಅನುವಂಶಿಕ ಕಾಯಿಲೆಗಳು, ದೈಹಿಕ ದೌರ್ಬಲ್ಯ ಹಾಗೂ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ. ಹೀಗಾಗಿ ಗೌರಿಗೆ ಬೇರೆ ವಂಶಾವಳಿಯ ಗಂಡು ಜಿರಾಫೆಯನ್ನು ಕರೆತರುವ ಮೂಲಕ ಆರೋಗ್ಯಕರ ಸಂತಾನೋತ್ಪತ್ತಿ ಮತ್ತು ಅನುವಂಶಿಕ ವೈವಿಧ್ಯತೆಯನ್ನು ಕಾಪಾಡಲು ಅರಣ್ಯ ಇಲಾಖೆ ಮುಂದಾಗಿದೆ.









