ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಅಮೆರಿಕಾ ತನ್ನ ಅತ್ಯಾಧುನಿಕ ಫೈಟರ್ ಜೆಟ್ಗಳು ಮತ್ತು ಹೈಟೆಕ್ ಡ್ರೋನ್ಗಳು ಸೇರಿದಂತೆ ಕನಿಷ್ಠ 42 ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಅಥವಾ ಅವು ಜಖಂಗೊಂಡಿವೆ ಎಂದು ಯುಎಸ್ ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS) ವರದಿ ಬಹಿರಂಗಪಡಿಸಿದೆ. “ಆಪರೇಷನ್ ಎಪಿಕ್ ಫ್ಯೂರಿ” ಎಂಬ ಸಂಕೇತ ನಾಮದಡಿ ನಡೆದ ಈ ಕಾರ್ಯಾಚರಣೆಗಳಿಂದಾಗಿ ಅಮೆರಿಕಾದ ರಕ್ಷಣಾ ಇಲಾಖೆಯು ತನ್ನ ಬಜೆಟ್ ಯೋಜನೆಯನ್ನು ಸಂಪೂರ್ಣವಾಗಿ ಬದಲಾಯಿಸುವಂತಾಗಿದೆ. ಈ ಸಂಘರ್ಷದ ಒಟ್ಟು ವೆಚ್ಚವು ಬರೋಬ್ಬರಿ 29 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದು, ಕಳೆದುಹೋದ ದುಬಾರಿ ಮಿಲಿಟರಿ ಆಸ್ತಿಗಳ ದುರಸ್ತಿ ಮತ್ತು ಮರುಖರೀದಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ವರದಿಯ ಪ್ರಕಾರ, ಇರಾನ್ನ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯಿಂದಾಗಿ ಅಮೆರಿಕಾದ ವಾಯುಪಡೆಗೆ ಭಾರಿ ಹೊಡೆತ ಬಿದ್ದಿದೆ. ಇದರಲ್ಲಿ ಮುಖ್ಯವಾಗಿ ಕಣ್ಗಾವಲು ನಡೆಸುವ ಅಮೆರಿಕಾದ ಡ್ರೋನ್ಗಳು ಹೆಚ್ಚಾಗಿ ನಾಶವಾಗಿದ್ದು, 24 MQ-9 ರೀಪರ್ ಡ್ರೋನ್ಗಳು ಮತ್ತು ಒಂದು MQ-4C ಟ್ರೈಟಾನ್ ಡ್ರೋನ್ ಸೇರಿವೆ. ಇದರೊಂದಿಗೆ ಅತ್ಯಂತ ಸುರಕ್ಷಿತ ಮತ್ತು ಬಲಿಷ್ಠ ಎಂದು ಪರಿಗಣಿಸಲಾಗಿದ್ದ ಯುದ್ಧ ವಿಮಾನಗಳಾದ ನಾಲ್ಕು F-15E ಸ್ಟ್ರೈಕ್ ಈಗಲ್, ಒಂದು A-10 ಥಂಡರ್ಬೋಲ್ಟ್ II ಮತ್ತು ಏಳು KC-135 ಇಂಧನ ಮರುಪೂರಣ ಟ್ಯಾಂಕರ್ಗಳು ಕೂಡ ಈ ಸಂಘರ್ಷದಲ್ಲಿ ಧ್ವಂಸಗೊಂಡಿವೆ ಅಥವಾ ಹಾನಿಗೊಳಗಾಗಿವೆ.
ಎಲ್ಲಕ್ಕಿಂತ ಮುಖ್ಯವಾಗಿ, ಅಮೆರಿಕಾದ ಹೆಮ್ಮೆಯ ತಂತ್ರಜ್ಞಾನಗಳಾದ E-3 ಸೆಂಟ್ರಿ AWACS (ವಾಯುಗಾಮಿ ಕಮಾಂಡ್ ವಿಮಾನ) ಮತ್ತು ಐದನೇ ಪೀಳಿಗೆಯ ಅತ್ಯಾಧುನಿಕ ಎಫ್-35ಎ (F-35A) ಸ್ಟೆಲ್ತ್ ಫೈಟರ್ ಜೆಟ್ ಕೂಡ ಇರಾನ್ ದಾಳಿಗೆ ತುತ್ತಾಗಿರುವುದು ಜಗತ್ತಿನಾದ್ಯಂತ ಸೇನಾ ತಜ್ಞರನ್ನು ಆಶ್ಚರ್ಯಚಕಿತಗೊಳಿಸಿದೆ. ಇರಾನ್ನ ಮಧ್ಯಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನೆಲದಿಂದ ನಡೆದ ದಾಳಿಯಿಂದಾಗಿ F-35A ವಿಮಾನವು ತೀವ್ರವಾಗಿ ಜಖಂಗೊಂಡು ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು ಎಂದು ವರದಿ ಹೇಳಿದೆ. ಅಮೆರಿಕಾ ಸರ್ಕಾರವು ಈ ನಷ್ಟದ ಅಂಕಿ-ಅಂಶಗಳನ್ನು ಇನ್ನೂ ಸಂಪೂರ್ಣವಾಗಿ ಅಧಿಕೃತಗೊಳಿಸದಿದ್ದರೂ, ಇರಾನ್ ಸರ್ಕಾರ ಮಾತ್ರ ಇದನ್ನು ತನ್ನ ರಕ್ಷಣಾ ವ್ಯವಸ್ಥೆಯ ಮಹತ್ತರ ಯಶಸ್ಸು ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸಿಕೊಳ್ಳುತ್ತಿದೆ.








