ದಳಪತಿ ವಿಜಯ್ ಮತ್ತು ತ್ರಿಶಾ ಅಭಿನಯದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸದಾ ಧೂಳೆಬ್ಬಿಸುತ್ತವೆ. ‘ಗಿಲ್ಲಿ’, ‘ಕುರುವಿ’, ‘ತಿರುಪಾಚಿ’ ಚಿತ್ರಗಳ ಬಳಿಕ ಈ ಜೋಡಿ ಮತ್ತೊಂದು ಬಿಗ್ ಪ್ರಾಜೆಕ್ಟ್ಗಾಗಿ ಒಂದಾಗಬೇಕಿತ್ತು. ಹೌದು, ನಿರ್ದೇಶಕ ಹರಿ ಅವರು ವಿಜಯ್ ಹಾಗೂ ತ್ರಿಶಾ ಕಾಂಬಿನೇಷನ್ನಲ್ಲಿ ‘ಕರುಪ್ಪು’ (Karuppu) ಹೆಸರಿನ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ವಿಜಯ್ ಕೂಡ ಕಥೆ ಕೇಳಿ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.
ಆದರೆ, ಚಿತ್ರೀಕರಣದ ಮುನ್ನಾದಿನಗಳಲ್ಲಿ ಕೆಲವು ಅನಿವಾರ್ಯ ಕಾರಣಗಳಿಂದಾಗಿ ವಿಜಯ್ ಈ ಚಿತ್ರದಿಂದ ಹಿಂದೆ ಸರಿಯಬೇಕಾಯಿತು. ಕಾಲ್ಶೀಟ್ ಸಮಸ್ಯೆಗಳು ಹಾಗೂ ನಿರ್ಮಾಣದ ಹಂತದಲ್ಲಿ ಎದುರಾದ ಕೆಲವು ಗೊಂದಲಗಳಿಂದಾಗಿ ದಳಪತಿ ವಿಜಯ್ ಈ ಪ್ರಾಜೆಕ್ಟ್ಗೆ ವಿದಾಯ ಹೇಳಿದರು. ಇದರಿಂದಾಗಿ ನಿರ್ದೇಶಕ ಹರಿ ಅವರು ಚಿತ್ರದ ಕಥೆಯನ್ನು ಕೊಂಚ ಬದಲಾಯಿಸಿ, ಬೇರೊಬ್ಬ ಸ್ಟಾರ್ ನಟನಿಗೆ ಕಥೆ ಹೇಳಲು ಮುಂದಾದರು. ಆ ನಟನೇ ಕೋಲಿವುಡ್ನ ಸಿಂಗಂ ಸೂರ್ಯ.
ವಿಜಯ್ ಕೈಬಿಟ್ಟ ಆ ಕಥೆಯನ್ನು ಸೂರ್ಯ ಒಪ್ಪಿಕೊಂಡಾಗ, ಚಿತ್ರದ ಶೀರ್ಷಿಕೆಯನ್ನು ‘ಕರುಪ್ಪು’ ಎಂಬುದರಿಂದ ‘ಆರು’ (Aaru) ಎಂದು ಬದಲಾಯಿಸಲಾಯಿತು. ನಾಯಕಿ ತ್ರಿಶಾ ಮಾತ್ರ ಹಾಗೇ ಉಳಿದುಕೊಂಡರು. ಹೀಗೆ ವಿಜಯ್ ಹಾಗೂ ತ್ರಿಶಾ ಜೊತೆಯಾಗಬೇಕಾಗಿದ್ದ ಸಿನಿಮಾ, ಕೊನೆಗೆ ಸೂರ್ಯ ಮತ್ತು ತ್ರಿಶಾ ಕಾಂಬಿನೇಷನ್ನಲ್ಲಿ ಮೂಡಿಬಂದು ಸೂಪರ್ ಹಿಟ್ ಲಿಸ್ಟ್ ಸೇರಿತು. ವಿಜಯ್ ಕೈತಪ್ಪಿದ ಈ ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ ಮತ್ತೊಂದು ದೊಡ್ಡ ತಿರುವು ನೀಡಿತು ಎಂಬುದು ವಿಶೇಷ.









