ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೆಹಲಿ ಹೈಕಮಾಂಡ್‌ನಿಂದ ಬುಲಾವ್ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೇನೂ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ದೆಹಲಿ ಪ್ರವಾಸದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನನ್ನ ಬಳಿ ಇಲ್ಲ. ಒಂದು ವೇಳೆ ಹೈಕಮಾಂಡ್ ಕರೆದಿದ್ದರೆ ಅದರಲ್ಲಿ ವಿಶೇಷವೇನೂ ಇಲ್ಲ, ಪಕ್ಷದ ನಾಯಕರು ಚರ್ಚೆಗೆ ಕರೆಯುವುದು ಸಹಜ ಎಂದು ಹೇಳಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ವದಂತಿಗಳು ಜೋರಾಗಿರುವ ಬೆನ್ನಲ್ಲೇ ಈ ದೆಹಲಿ ಪ್ರವಾಸದ ಸುದ್ದಿ ತೀವ್ರ ಕುತೂಹಲ ಮೂಡಿಸಿದೆ. ಆದರೆ, ಈ ಎಲ್ಲಾ ಚರ್ಚೆಗಳನ್ನು ತಳ್ಳಿಹಾಕಿರುವ ಡಿಸಿಎಂ, ಪಕ್ಷದಲ್ಲಿ ಯಾವುದೇ ಆಂತರಿಕ ಗೊಂದಲಗಳಿಲ್ಲ. ಆಡಳಿತಾತ್ಮಕ ವಿಷಯಗಳು ಅಥವಾ ನಿಗಮ ಮಂಡಳಿಗಳ ನೇಮಕಾತಿಯ ಕುರಿತು ಚರ್ಚಿಸಲು ನಾಯಕರು ದೆಹಲಿಗೆ ಹೋಗುತ್ತಿರುತ್ತಾರೆ, ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಿದ್ಧತೆಯ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲ ಇರುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಹೈಕಮಾಂಡ್ ಕರೆ ನೀಡಿದಾಗಲೆಲ್ಲಾ ಹೋಗಿ ಮಾಹಿತಿ ನೀಡುವುದು ನಮ್ಮ ಕರ್ತವ್ಯ, ಸದ್ಯದ ಮಟ್ಟಿಗೆ ಸಿಎಂ ಭೇಟಿಯ ಹಿಂದಿನ ನಿಖರ ಕಾರಣ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು.









