2026ರ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಬಿಸಿಸಿಐ (BCCI) ದಿಢೀರ್ ನಿರ್ಧಾರ ಕೈಗೊಂಡು ಫೈನಲ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಪಂದ್ಯದ ಸ್ಥಳಾಂತರಕ್ಕೆ ಭದ್ರತಾ ವೈಫಲ್ಯ ಅಥವಾ ರಾಜಕೀಯ ಒತ್ತಡಗಳು ಕಾರಣವಲ್ಲ, ಬದಲಾಗಿ ‘ವಾಣಿಜ್ಯ ಲಾಭ’ (Commercial Viability) ಮತ್ತು ಕ್ರೀಡಾಂಗಣದ ಆಸನ ಸಾಮರ್ಥ್ಯವೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಸುಮಾರು 33,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಸುಮಾರು 7,000 ರಿಂದ 8,000 ಸೀಟುಗಳು ವಿಐಪಿಗಳು, ಪ್ರಾಯೋಜಕರು ಮತ್ತು ಫೈನಲ್ ಆಡುವ ತಂಡಗಳಿಗೆ ಮೀಸಲಾಗಿರುತ್ತವೆ. ಇದರಿಂದಾಗಿ ಸಾಮಾನ್ಯ ಜನರಿಗೆ ಕೇವಲ 25,000 ಟಿಕೆಟ್ಗಳು ಮಾತ್ರ ಲಭ್ಯವಾಗುತ್ತವೆ. ಆದರೆ ಅಹಮದಾಬಾದ್ನ ಕ್ರೀಡಾಂಗಣವು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸುವುದರಿಂದ, ಆರ್ಥಿಕವಾಗಿ ಹೆಚ್ಚಿನ ಲಾಭ ಗಳಿಸಲು ಬಿಸಿಸಿಐ ಈ ನಿರ್ಧಾರ ಕೈಗೊಂಡಿರಬಹುದು ಎಂದು ಸಚಿವರು ವಿವರಿಸಿದ್ದಾರೆ.
ಇದೇ ವೇಳೆ, ಶಾಸಕರಿಗೆ ಉಚಿತ ಟಿಕೆಟ್ ನೀಡುವಂತೆ ಸರ್ಕಾರ ಒತ್ತಡ ಹೇರಿದ್ದರಿಂದ ಪಂದ್ಯ ಸ್ಥಳಾಂತರಗೊಂಡಿದೆ ಎಂಬ ಆರೋಪಗಳನ್ನು ಸಚಿವರು ತಳ್ಳಿಹಾಕಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಐದು ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು, ಪೊಲೀಸ್ ಇಲಾಖೆಯಾಗಲಿ ಅಥವಾ ಕೆಎಸ್ ಸಿಎ (KSCA) ಆಗಲಿ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ಭದ್ರತೆಯ ವಿಷಯದಲ್ಲಿ ಯಾವುದೇ ಲೋಪಗಳಿಲ್ಲದಿದ್ದರೂ, ಕ್ರೀಡಾಂಗಣದ ವಿಸ್ತೀರ್ಣ ಮತ್ತು ಆದಾಯದ ಲೆಕ್ಕಾಚಾರದಿಂದಾಗಿ ಬೆಂಗಳೂರಿಗೆ ಸಿಗಬೇಕಿದ್ದ ಫೈನಲ್ ಪಂದ್ಯ ಕೈತಪ್ಪಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.









