ಕೊಲಂಬೊ: ಲಂಕಾ ಪ್ರೀಮಿಯರ್ ಲೀಗ್ (LPL) ವೇಳೆ ಆಟಗಾರನಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಭಾರತದ ಮಾಜಿ ಅಂಡರ್-19 ವಿಶ್ವಕಪ್ ವಿಜೇತ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಬಂಧಿಸಿದ್ದಾರೆ. ಶುಕ್ರವಾರ ನಡೆದ ಈ ಬಂಧನ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
2018ರ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಲ್ರಾ ವಿರುದ್ಧ ಕ್ರೀಡೆಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವಿಶೇಷ ತನಿಖಾ ಘಟಕವು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಬಂಧನದ ಬಳಿಕ ಮಂಜೋತ್ ಕಲ್ರಾ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಲಂಚದ ಆರೋಪಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತನಿಖೆಯ ಬಳಿಕವೇ ಬಹಿರಂಗವಾಗುವ ಸಾಧ್ಯತೆ ಇದೆ.








