ಯುಎಸ್-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿರುವ ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್ ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ಆರೋಗ್ಯ ಮತ್ತು ನಾಯಕತ್ವದ ಕುರಿತು ದೇಶಾದ್ಯಂತ ಕುತೂಹಲ ವ್ಯಕ್ತವಾಗುತ್ತಿದೆ.
ತಮ್ಮ ತಂದೆಯ ಹತ್ಯೆಯ ಬಳಿಕ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ ಇದುವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆ, ಅವರ ಗೈರುಹಾಜರಾತಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಧ್ಯಕ್ಷ ಪೆಜೆಷ್ಕಿಯಾನ್, "ಪ್ರಸ್ತುತ ಅವರೊಂದಿಗೆ ಸಂವಹನ ನಡೆಸುವುದು ಬಹಳ ಕಷ್ಟಕರವಾಗಿದೆ. ಆದರೂ ಈ ಸಂಕಷ್ಟದ ಸಂದರ್ಭದಲ್ಲಿ ಅವರ ಉಪಸ್ಥಿತಿಯೇ ನಮಗೆ ದೊಡ್ಡ ಶಕ್ತಿ ಮತ್ತು ಧೈರ್ಯ ನೀಡುತ್ತದೆ" ಎಂದು ಹೇಳಿದ್ದಾರೆ. ಅವರ ಹೇಳಿಕೆ ಮಧ್ಯಪ್ರಾಚ್ಯದ ಬೆಳವಣಿಗೆಗಳ ನಡುವೆ ಮಹತ್ವ ಪಡೆದಿದೆ.









