ಬೆಂಗಳೂರು ನಗರದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಮತ್ತು ಆರ್‌ಟಿಒ ಅಧಿಕಾರಿಗಳ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ದಂಡ ಹಾಗೂ ವಾಹನ ಜಪ್ತಿಯಾಗುವ ಭೀತಿಯಿಂದ ಹೆಚ್ಚಿನ ಬೈಕ್ ಟ್ಯಾಕ್ಸಿ ಚಾಲಕರು ಆಫ್‌ಲೈನ್ ಆಗಿರುವುದರಿಂದ ನಗರದಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರ ಗಣನೀಯವಾಗಿ ಕುಸಿದಿದೆ.
ಇದರ ನೇರ ಪರಿಣಾಮವಾಗಿ ಆಟೋರಿಕ್ಷಾಗಳ ಬೇಡಿಕೆ ಹೆಚ್ಚಿದ್ದು, ಹಲವು ಪ್ರದೇಶಗಳಲ್ಲಿ ಪ್ರಯಾಣ ದರದಲ್ಲೂ ಏರಿಕೆ ಕಂಡುಬಂದಿದೆ. ಕಡಿಮೆ ವೆಚ್ಚದಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ಈಗ ಹೆಚ್ಚಿನ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಿಶೇಷವಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಕೊನೆಯ ಹಂತದ (ಲಾಸ್ಟ್ ಮೈಲ್) ಸಂಪರ್ಕಕ್ಕಾಗಿ ದುಬಾರಿ ಆಟೋಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ನಗರದಲ್ಲಿ ಬೈಕ್ ಟ್ಯಾಕ್ಸಿಗಳ ಲಭ್ಯತೆ ಕಡಿಮೆಯಾಗಿರುವುದರಿಂದ ದೈನಂದಿನ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಾಗಿ ಪರದಾಡುತ್ತಿದ್ದಾರೆ. ಈ ಬೆಳವಣಿಗೆ ಸಾರ್ವಜನಿಕರ ಸಂಚಾರ ವೆಚ್ಚವನ್ನು ಹೆಚ್ಚಿಸಿದ್ದು, ಬೈಕ್ ಟ್ಯಾಕ್ಸಿಗಳ ವಿರುದ್ಧದ ಕಾರ್ಯಾಚರಣೆಯ ಪರಿಣಾಮ ನಗರ ಸಾರಿಗೆ ವ್ಯವಸ್ಥೆಯ ಮೇಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ.









