ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆ ಎಂಬಂತೆ ಮೋದಿ ಅವರ ವಿಧಾನವನ್ನು ವ್ಯಂಗ್ಯವಾಡಿದ್ದಾರೆ. ಆಗಸ್ಟ್ 13ರಂದು ನಡೆದ ರಚನಾತ್ಮಕ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಈ ಟೀಕೆ ಮಾಡಿದ್ದಾರೆ.
ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ, ವಿದೇಶಾಂಗ ನೀತಿಯ ಕುರಿತು “ವಿಚಿತ್ರ ಐಡಿಯಾಗಳು” ಜನರ ತಲೆಗೆ ಹೋಗುತ್ತವೆ ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ವೇದಿಕೆಯಲ್ಲೇ ಅಪ್ಪಿಕೊಂಡು, ಪ್ರಧಾನಿ ಮೋದಿ ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ರೀತಿಯನ್ನು ಹೋಲಿಕೆ ಮಾಡಿದರು.
ರಾಹುಲ್ ಗಾಂಧಿಯವರ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೋದಿ ಅವರ ವಿದೇಶಾಂಗ ನೀತಿಯನ್ನು ಟೀಕಿಸುವ ಹಕ್ಕು ವಿರೋಧ ಪಕ್ಷಕ್ಕಿದೆ ಎಂದು ಕಾಂಗ್ರೆಸ್ ವಾದಿಸುತ್ತಿದ್ದರೆ, ಬಿಜೆಪಿ ನಾಯಕರು ರಾಹುಲ್ ಅವರ ಹೇಳಿಕೆಯನ್ನು ವೈಯಕ್ತಿಕ ಮತ್ತು ಅಸಂಸದೀಯ ಟೀಕೆಯೆಂದು ಆಕ್ಷೇಪಿಸಿದ್ದಾರೆ.








