ಬೆಂಗಳೂರು: ಉದ್ಯಾನನಗರಿಯಲ್ಲಿ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಸರ್ಕಾರವು Greater Bengaluru Area (Parking) Rules, 2026ರ ಕರಡು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವ ಪ್ರಸ್ತಾವನೆ ಮಾಡಿದೆ. ಕರಡು ನಿಯಮಗಳ ಪ್ರಕಾರ, ವಸತಿ ಪ್ರದೇಶಗಳ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ನಿವಾಸಿಗಳಿಗೂ ವಾರ್ಷಿಕ ಪಾರ್ಕಿಂಗ್ ಪರವಾನಗಿ ಶುಲ್ಕ ವಿಧಿಸುವ ಸಾಧ್ಯತೆ ಇದೆ.
ವಸತಿ ರಹಿತ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕವು ರಸ್ತೆಯ ವರ್ಗ ಹಾಗೂ ವಾಹನದ ಪ್ರಕಾರ ಬದಲಾಗಲಿದೆ. ಪ್ರಸ್ತಾವಿತ ದರಗಳ ಪ್ರಕಾರ, A ವರ್ಗದ ರಸ್ತೆಯಲ್ಲಿ ಕಾರುಗಳಿಗೆ ಗಂಟೆಗೆ ಕನಿಷ್ಠ ₹80 ಮತ್ತು ದ್ವಿಚಕ್ರ ವಾಹನಗಳಿಗೆ ₹40 ಶುಲ್ಕ ಇರಬಹುದು. B ವರ್ಗದ ರಸ್ತೆಯಲ್ಲಿ ಕಾರುಗಳಿಗೆ ₹60 ಹಾಗೂ ದ್ವಿಚಕ್ರ ವಾಹನಗಳಿಗೆ ₹30, C ವರ್ಗದ ರಸ್ತೆಯಲ್ಲಿ ಕಾರುಗಳಿಗೆ ₹40 ಹಾಗೂ ದ್ವಿಚಕ್ರ ವಾಹನಗಳಿಗೆ ₹20 ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ಇದೆ. ದೀರ್ಘಾವಧಿ ರಸ್ತೆ ಬದಿಯ ಪಾರ್ಕಿಂಗ್ ಅನ್ನು ನಿರುತ್ಸಾಹಗೊಳಿಸಲು ಹೆಚ್ಚಿನ ಶುಲ್ಕ ವಿಧಿಸುವ ವ್ಯವಸ್ಥೆಯನ್ನೂ ಕರಡು ನಿಯಮಗಳು ಒಳಗೊಂಡಿವೆ.
ಈ ನಿಯಮಗಳು ಇನ್ನೂ ಕರಡು ಹಂತದಲ್ಲಿದ್ದು, ತಕ್ಷಣದಿಂದ ಜಾರಿಗೆ ಬಂದಿಲ್ಲ. ಅಧಿಸೂಚನೆ ಪ್ರಕಟವಾದ ದಿನದಿಂದ 30 ದಿನಗಳ ಅವಧಿಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ. ಅಂತಿಮ ನಿಯಮಗಳು ಜಾರಿಯಾದ ಬಳಿಕವೇ ನಿಖರ ಶುಲ್ಕ ಮತ್ತು ಅನುಷ್ಠಾನದ ವಿಧಾನ ಸ್ಪಷ್ಟವಾಗಲಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ರಸ್ತೆ ಬದಿಯ ಪಾರ್ಕಿಂಗ್ ನಿಯಂತ್ರಿಸುವುದು ಮತ್ತು ಆಫ್-ಸ್ಟ್ರೀಟ್ ಪಾರ್ಕಿಂಗ್‌ಗೆ ಉತ್ತೇಜನ ನೀಡುವುದು ಈ ನೀತಿಯ ಪ್ರಮುಖ ಉದ್ದೇಶಗಳಾಗಿವೆ.








