ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಅವರು ಮಾಡಿರುವ ಗಂಭೀರ ಆರೋಪಗಳನ್ನು ರಾಜಕೀಯ ದಾಳಿಗಳ ಮೂಲಕವಾಗಲಿ ಅಥವಾ ಅನುಕೂಲಕ್ಕೆ ತಕ್ಕಂತೆ ಮೌನ ವಹಿಸುವ ಮೂಲಕವಾಗಲಿ ತಳ್ಳಿಹಾಕಲು ಸಾಧ್ಯವಿಲ್ಲ. ಈ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಮತ್ತು ಸರ್ಕಾರ ವಿಶ್ವಾಸಾರ್ಹ ಉತ್ತರಗಳನ್ನು ನೀಡಬೇಕು ಎಂದು ಪರಮೇಶ್ವರ್ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪರಮೇಶ್ವರ್ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿ ನಾಲ್ಕು ದಿನಗಳು ಕಳೆದರೂ ಪ್ರಧಾನಮಂತ್ರಿಗಳಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಈ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಮರ್ಪಕ ಸ್ಪಷ್ಟನೆ ನೀಡಿಲ್ಲ. ತಮ್ಮ ಸರ್ಕಾರದ ವಿರುದ್ಧದ ಈ ಗಂಭೀರ ಆರೋಪದ ಬಗ್ಗೆ ಬಿಜೆಪಿಯ ವಕ್ತಾರರು ವೈಯಕ್ತಿಕ ಟೀಕೆ ಮತ್ತು ರಾಜಕೀಯ ಪ್ರೇರಿತ ದಾಳಿಗಳಲ್ಲಿ ಮಗ್ನರಾಗಿದ್ದಾರೆ. ಆದರೆ ಇವು ಸರ್ಕಾರ ನೀಡಬೇಕಾದ ಸೂಕ್ತ ಉತ್ತರಕ್ಕೆ ಪರ್ಯಾಯವಾಗಲಾರವು.
ಲೋಕಸಭೆಯ ವಿರೋಧ ಪಕ್ಷದ ನಾಯಕರೊಬ್ಬರು ತಮ್ಮ ದೂರವಾಣಿ ಕದ್ದಾಲಿಕೆಯಾಗುತ್ತಿದೆ ಎಂದು ಆರೋಪಿಸಿದಾಗ, ಅದು ಕೇವಲ ಅವರ ವೈಯಕ್ತಿಕ ಗೌಪ್ಯತೆಯ ಪ್ರಶ್ನೆಯಾಗಿ ಉಳಿಯುವುದಿಲ್ಲ. ಬದಲಾಗಿ, ನಮ್ಮ ಪ್ರಜಾಪ್ರಭುತ್ವದ ಆರೋಗ್ಯ ಹಾಗೂ ಅಧಿಕಾರದಲ್ಲಿರುವವರ ಉತ್ತರದಾಯಿತ್ವದ ಕುರಿತು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಗೂಢಚರ್ಯೆ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಸ್ವಾಯತ್ತ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಆತಂಕಕಾರಿ ವಿವಾದಗಳ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ಪರಿಶೀಲಿಸಬೇಕಾಗಿದೆ.
ಕೇಂದ್ರ ಸರ್ಕಾರ ಸಮರ್ಪಕ ಸಹಕಾರ ನೀಡಿಲ್ಲ
ಪೆಗಾಸಸ್ ಗೂಢಚರ್ಯೆ ವಿವಾದದಲ್ಲಿ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂಬ ಆರೋಪಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು, ತನಿಖೆಗೆ ಕೇಂದ್ರ ಸರ್ಕಾರ ಸಮರ್ಪಕ ಸಹಕಾರ ನೀಡಿಲ್ಲ ಎಂದು ವರದಿ ಮಾಡಿತ್ತು.
2023ರಲ್ಲಿ ಹಲವು ವಿರೋಧ ಪಕ್ಷಗಳ ನಾಯಕರಿಗೆ, ಸರ್ಕಾರದ ಪ್ರಾಯೋಜಿತ ಗೂಢಚರ್ಯೆ ತಂತ್ರಾಂಶಗಳ ಮೂಲಕ ತಮ್ಮ ಸಂಪರ್ಕ ಸಾಧನಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ಸಂದೇಶಗಳು ಆ್ಯಪಲ್ ಸಂಸ್ಥೆಯಿಂದ ಬಂದಿದ್ದವು . ಇದೇ ವೇಳೆ, ಭಾರತೀಯ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ದಾಳಿ ನಡೆಸಿರುವ ಚಟುವಟಿಕೆಗಳನ್ನು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಗುರುತಿಸಿತ್ತು. ಆದರೆ ಈ ಎರಡೂ ಪ್ರಕರಣಗಳಲ್ಲಿ ದಾಳಿಗೆ ಆದೇಶ ನೀಡಿದವರು ಯಾರು ಎಂಬುದು ದೃಢಪಟ್ಟಿರಲಿಲ್ಲ. ಇವು ಗಂಭೀರ ಪರಿಶೀಲನೆಗೆ ಒಳಪಡಬೇಕಾದ ವಿಚಾರಗಳಾಗಿವೆ
ಸ್ವತಂತ್ರ ತನಿಖೆ ನಡೆಯಬೇಕಾಗಿದೆ
ಈ ಆತಂಕಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತೆ, ಬಿಜೆಪಿಯು ವಿರೋಧ ಪಕ್ಷಗಳ ನಾಯಕರ ದೂರವಾಣಿ ಕದ್ದಾಲಿಕೆ ನಡೆಸುವ ಮೊದಲು ತನ್ನದೇ ಪಕ್ಷದ ನಾಯಕರ ಮೇಲೆ ಈ ಪ್ರಯೋಗ ನಡೆಸಿತ್ತು ಎಂದು ಕರ್ನಾಟಕದ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಇದೀಗ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮ್ಮನ್ನೂ ಒಳಗೊಂಡಂತೆ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಗಂಭೀರ ಆರೋಪಗಳ ಬಗ್ಗೆಯೂ ಸ್ವತಂತ್ರ ತನಿಖೆ ನಡೆಯಬೇಕಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಸಾಕ್ಷ್ಯಚಿತ್ರವನ್ನು ಬಿಬಿಸಿ ಪ್ರಸಾರ ಮಾಡಿದಾಗ, ಕೇಂದ್ರ ಸರ್ಕಾರ ಆ ಸಾಕ್ಷ್ಯಚಿತ್ರದ ವೀಕ್ಷಣೆಗೆ ನಿರ್ಬಂಧ ಹೇರಿತು . ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಬಿಸಿ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಮೀಡಿಯಾ ಒನ್ ಸುದ್ದಿವಾಹಿನಿಯ ಪ್ರಸಾರಕ್ಕೆ ನಿರ್ಬಂಧ ವಿಧಿಸಿದಾಗ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪತ್ರಿಕಾ ಸ್ವಾತಂತ್ರ್ಯದ ಸಾಂವಿಧಾನಿಕ ಮಹತ್ವವನ್ನು ಪುನರುಚ್ಚರಿಸಿತು.
ರಾಜಕೀಯ ಪಕ್ಷಗಳಿಗೆ ಹರಿದುಬರುವ ದೇಣಿಗೆಗಳ ಮಾಹಿತಿಯನ್ನು ಸಾರ್ವಜನಿಕ ಪರಿಶೀಲನೆಯಿಂದ ಮರೆಮಾಚುತ್ತಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿತು. ಅದಾನಿ ಸಮೂಹವು ಎನ್ಡಿಟಿವಿ ಸುದ್ದಿಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಾಗ, ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಮಾಧ್ಯಮಗಳ ಮಾಲೀಕತ್ವ ಕೇಂದ್ರೀಕರಣಗೊಳ್ಳುತ್ತಿರುವುದು ಹಾಗೂ ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ಎದುರಾಗಬಹುದಾದ ಅಪಾಯಗಳ ಕುರಿತು ಆತಂಕಗಳು ಮತ್ತಷ್ಟು ಹೆಚ್ಚಾದವು ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ದೇಶದ ಶತ್ರುಗಳಲ್ಲ
ಇವೆಲ್ಲವೂ ಪ್ರತ್ಯೇಕ ರಾಜಕೀಯ ವಿವಾದಗಳಷ್ಟೇ ಅಲ್ಲ. ಇವುಗಳನ್ನು ಒಟ್ಟಾಗಿ ಗಮನಿಸಿದಾಗ, ಪ್ರಭುತ್ವದ ಅಧಿಕಾರ, ಕಾರ್ಪೊರೇಟ್ ಪ್ರಭಾವ, ಸ್ವಾಯತ್ತ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆ ಹಾಗೂ ಭಾರತದ ನಾಗರಿಕರ ಮೂಲಭೂತ ಸ್ವಾತಂತ್ರ್ಯಗಳ ನಡುವಿನ ಸಂಬಂಧದ ಕುರಿತು ಗಂಭೀರ ಮತ್ತು ಆತಂಕಕಾರಿ ಪ್ರಶ್ನೆಗಳು ಉದ್ಭವಿಸುತ್ತವೆ. ವಿರೋಧ ಪಕ್ಷಗಳು ದೇಶದ ಶತ್ರುಗಳಲ್ಲ, ಪತ್ರಕರ್ತರು ರಾಷ್ಟ್ರದ ವಿರೋಧಿಗಳಲ್ಲ. ಪ್ರಧಾನಮಂತ್ರಿಯನ್ನು ಪ್ರಶ್ನಿಸುವ ವ್ಯಕ್ತಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದಂತಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು.
ರಾಹುಲ್ ಗಾಂಧಿ ಅವರು ಸರ್ಕಾರವನ್ನು ಪ್ರಶ್ನಿಸಲು ತಾವು ಸದಾ ಸಿದ್ಧರಿದ್ದೇವೆ ಎಂಬುದನ್ನು ಹಲವು ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು ಹಾಕಿರುವುದು ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ದೂರವಾಣಿ ಕದ್ದಾಲಿಕೆ, ಸರ್ಕಾರದ ಉತ್ತರದಾಯಿತ್ವ ಹಾಗೂ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳಿಗೆ ಪ್ರಧಾನಮಂತ್ರಿಯವರು ಉತ್ತರಿಸಬೇಕು.
ತನ್ನ ಪ್ರಾಮಾಣಿಕತೆಯ ಬಗ್ಗೆ ವಿಶ್ವಾಸವಿರುವ ಸರ್ಕಾರವೆಂದೂ ತನ್ನನ್ನು ಪರಿಶೀಲನೆಗೆ ಒಡ್ಡಿಕೊಳ್ಳಲು ಹೆದರುವುದಿಲ್ಲ. ಪ್ರಧಾನಮಂತ್ರಿಗಳು ತಾವು ಸಮರ್ಥರಾಗಿದ್ದರೆ ಕಠಿಣ ಪ್ರಶ್ನೆಗಳಿಂದ ನುಣುಚಿಕೊಳ್ಳುವುದಿಲ್ಲ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಢಾಚರ್ಯೆಯ ಭಯ ಅಥವಾ ಸಾಂಸ್ಥಿಕ ಒತ್ತಡಗಳ ಮೂಲಕ ಭಿನ್ನಮತದ ಧ್ವನಿಯನ್ನು ಅಡಗಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚಿನ ದೂರವಾಣಿ ಕದ್ದಾಲಿಕೆ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಹಿಂದೆ ನಡೆದ ಕಣ್ಗಾವಲು ಮತ್ತು ಗೂಢಚರ್ಯೆ ಪ್ರಕರಣಗಳ ತನಿಖೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪತ್ರಕರ್ತರು, ರಾಜಕೀಯ ಪ್ರತಿನಿಧಿಗಳು ಹಾಗೂ ಸಾಮಾನ್ಯ ನಾಗರಿಕರ ಗೌಪ್ಯತೆ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಇನ್ನಷ್ಟು ಬಲವಾದ ಸುರಕ್ಷತಾ ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ನಾನು ಆಗ್ರಹಿಸುತ್ತೇನೆ. ಪ್ರಧಾನಮಂತ್ರಿಯವರು ದೇಶದ ಜನತೆಗೆ ಉತ್ತರದಾಯಿಯೇ ಹೊರತು ಪ್ರಧಾನಿಯನ್ನು ಪ್ರಶ್ನಿಸಿದ್ದಕ್ಕಾಗಿ ಜನರು ಅವರಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.








