ವಿಶ್ವದ ದೈತ್ಯ ಸರ್ಚ್ ಇಂಜಿನ್ ಗೂಗಲ್‌ಗೆ ಆರಂಭಿಕ ಹಂತದಲ್ಲೇ ಬಂಡವಾಳ ಹೂಡಿ ಅದರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಮೂಲದ ಬಿಲಿಯನೇರ್ ರಾಮ್ ಶ್ರೀರಾಮ್, ಈಗ ಭಾರತದ ಬಾಹ್ಯಾಕಾಶ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಹೈದರಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಮೇಲೆ ಶ್ರೀರಾಮ್ ಅವರ ‘ಶೆರ್ಪಾಲೋ ವೆಂಚರ್ಸ್’ ನೇತೃತ್ವದಲ್ಲಿ ಇತ್ತೀಚೆಗೆ 60 ಮಿಲಿಯನ್ ಡಾಲರ್ (ಸುಮಾರು 500 ಕೋಟಿ ರೂ.ಗೂ ಹೆಚ್ಚು) ಹೂಡಿಕೆ ಮಾಡಲಾಗಿದೆ. ಈ ಹೂಡಿಕೆಯೊಂದಿಗೆ ಸ್ಕೈರೂಟ್ ಸಂಸ್ಥೆಯ ಒಟ್ಟು ಮೌಲ್ಯ 1.1 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಭಾರತದ ಮೊದಲ ‘ಸ್ಪೇಸ್-ಟೆಕ್ ಯೂನಿಕಾರ್ನ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೆನ್ನೈನಲ್ಲಿ ಜನಿಸಿ, ಅಮೆರಿಕದಲ್ಲಿ ನೆಲೆಸಿರುವ ರಾಮ್ ಶ್ರೀರಾಮ್ ಅವರು ಕೇವಲ ಹೂಡಿಕೆದಾರರಲ್ಲದೆ, ಗೂಗಲ್‌ನ ಮಾತೃ ಸಂಸ್ಥೆಯಾದ ‘ಅಲ್ಫಾಬೆಟ್’ನ ನಿರ್ದೇಶಕ ಮಂಡಳಿಯ ಸದಸ್ಯರೂ ಆಗಿದ್ದಾರೆ. ಸ್ಕೈರೂಟ್ ಸಂಸ್ಥೆಯು ಖಾಸಗಿ ವಲಯದಲ್ಲಿ ಭಾರತದ ಮೊದಲ ರಾಕೆಟ್ ‘ವಿಕ್ರಮ್-ಎಸ್’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈಗ ಶ್ರೀರಾಮ್ ಅವರ ಬಂಡವಾಳದ ನೆರವಿನೊಂದಿಗೆ ಸಂಸ್ಥೆಯು ತನ್ನ ಮುಂದಿನ ಗುರಿಯಾದ ‘ವಿಕ್ರಮ್-1’ ಕಕ್ಷೀಯ ರಾಕೆಟ್ ಉಡಾವಣೆ ಮತ್ತು ಉಪಗ್ರಹ ಉಡಾವಣಾ ತಂತ್ರಜ್ಞಾನವನ್ನು ಮತ್ತಷ್ಟು ಬಲಪಡಿಸಲು ಸಜ್ಜಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಭಾಗಿತ್ವಕ್ಕೆ ಭಾರತ ಸರ್ಕಾರ ಉತ್ತೇಜನ ನೀಡುತ್ತಿರುವ ಬೆನ್ನಲ್ಲೇ, ರಾಮ್ ಶ್ರೀರಾಮ್ ಅವರಂತಹ ಜಾಗತಿಕ ಮಟ್ಟದ ಹೂಡಿಕೆದಾರರು ಮುಂದೆ ಬಂದಿರುವುದು ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಆನೆ ಬಲ ಬಂದಂತಾಗಿದೆ. ಸ್ಕೈರೂಟ್ ಮಾತ್ರವಲ್ಲದೆ ಇನ್ಮೋಬಿ ಮತ್ತು ರೇಜರ್‌ಪೇ ಅಂತಹ ಯಶಸ್ವಿ ಸಂಸ್ಥೆಗಳಲ್ಲೂ ಹೂಡಿಕೆ ಮಾಡಿರುವ ಇವರು, ಭಾರತೀಯ ಪ್ರತಿಭೆ ಮತ್ತು ತಂತ್ರಜ್ಞಾನದ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಈ ಹೂಡಿಕೆಯು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಖಾಸಗಿ ಸಂಸ್ಥೆಗಳು ಅಮೆರಿಕದ ಸ್ಪೇಸ್‌ಎಕ್ಸ್‌ನಂತಹ ಸಂಸ್ಥೆಗಳಿಗೆ ಪೈಪೋಟಿ ನೀಡಲು ಹೊಸ ಹಾದಿ ಮಾಡಿಕೊಟ್ಟಿದೆ.









