ಬೇಸಿಗೆ ಬಂತೆಂದರೆ ಎಲ್ಲರ ನೆಚ್ಚಿನ ಹಣ್ಣು ಕಲ್ಲಂಗಡಿ. ದೇಹವನ್ನು ತಂಪಾಗಿಡಲು ಮತ್ತು ನಿರ್ಜಲೀಕರಣದಿಂದ (Dehydration) ರಕ್ಷಿಸಲು ಬಹುಪಾಲು ಜನರು ಈ ಹಣ್ಣಿನ ಮೊರೆ ಹೋಗುತ್ತಾರೆ. ಆದರೆ, ಕಲ್ಲಂಗಡಿಯನ್ನು ಕತ್ತರಿಸಿದ ನಂತರ ಅದನ್ನು ಸರಿಯಾದ ಸಮಯದೊಳಗೆ ಸೇವಿಸುವುದು ಅತ್ಯಂತ ಮುಖ್ಯ. ಒಮ್ಮೆ ಕತ್ತರಿಸಿದ ಹಣ್ಣನ್ನು ಹಾಗೆಯೇ ವಾತಾವರಣಕ್ಕೆ ತೆರೆದಿಟ್ಟು ಗಂಟೆಗಟ್ಟಲೆ ಬಿಡುವುದು ಅಥವಾ ಮರುದಿನ ತಿನ್ನುವ ಅಭ್ಯಾಸವಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರಬಹುದು.
ಆರೋಗ್ಯ ತಜ್ಞರ ಪ್ರಕಾರ, ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ ಎರಡು ಗಂಟೆಯೊಳಗೆ (ರೂಮ್ ತಾಪಮಾನದಲ್ಲಿ) ತಿಂದು ಮುಗಿಸುವುದು ಅತ್ಯಂತ ಸೂಕ್ತ. ಕಲ್ಲಂಗಡಿಯಲ್ಲಿ ಶೇ.೯೦ ರಷ್ಟು ನೀರಿನಂಶ ಮತ್ತು ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಾಗಿರುವುದರಿಂದ, ಕತ್ತರಿಸಿ ತೆರೆದಿಟ್ಟಾಗ ವಾತಾವರಣದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳು (ಉದಾಹರಣೆಗೆ ಸಾಲ್ಮೊನೆಲ್ಲಾ) ಬಹುಬೇಗನೆ ಹಣ್ಣಿನ ಮೇಲೆ ವೃದ್ಧಿಯಾಗತೊಡಗುತ್ತವೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಈ ಬ್ಯಾಕ್ಟೀರಿಯಾಗಳು ದ್ವಿಗುಣಗೊಂಡು ಹಣ್ಣು ಬಹುಬೇಗನೆ ಹಾಳಾಗಲು, ಹುಳಿಯಾಗಲು ಕಾರಣವಾಗುತ್ತವೆ.
ಕತ್ತರಿಸಿ ಬಹಳ ಸಮಯದವರೆಗೆ ಹೊರಗಟ್ಟ ಕಲ್ಲಂಗಡಿ ಹಣ್ಣನ್ನು ತಿಂದರೆ ‘ಫುಡ್ ಪಾಯ್ಸನಿಂಗ್’ (Food Poisoning) ಆಗುವ ಅಪಾಯವಿರುತ್ತದೆ. ಇದರಿಂದ ಹೊಟ್ಟೆ ನೋವು, ವಾಂತಿ, ಭೇದಿ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ, ನಿಮಗೆ ಎಷ್ಟು ಬೇಕೋ ಅಷ್ಟೇ ಹಣ್ಣನ್ನು ಕತ್ತರಿಸಿಕೊಂಡು ತಾಜಾವಾಗಿದ್ದಾಗಲೇ ಸೇವಿಸಿ. ಒಂದು ವೇಳೆ ಉಳಿದ ಕತ್ತರಿಸಿದ ತುಂಡುಗಳನ್ನು ಇಡಲೇಬೇಕಾದರೆ, ಗಾಳಿಯಾಡದ (Air-tight) ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್ನಲ್ಲಿ ಭದ್ರಪಡಿಸಿ, ಆದಷ್ಟು ಬೇಗ ಸೇವಿಸಿ ಮುಗಿಸುವುದು ಉತ್ತಮ. ಈ ಸಣ್ಣ ಮುನ್ನೆಚ್ಚರಿಕೆ ನಿಮ್ಮನ್ನು ಬೇಸಿಗೆಯ ಕಾಯಿಲೆಗಳಿಂದ ದೂರವಿಡುತ್ತದೆ.








