ಶಿವಂ ಅಸೋಸಿಯೇಟ್ಸ್‌ ವಂಚನೆ ಕೇಸ್‌ನಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ-ನಟಿಯರ ಹೆಸರು ಲಿಂಕ್‌, ಯಾರಿಗೆಲ್ಲ ಢವಢವ?

ಬೆಳಗಾವಿ ಮೂಲದ ‘ಶಿವಂ ಅಸೋಸಿಯೇಟ್ಸ್’ ನಡೆಸಿರುವ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ವಂಚನೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಸ್ಯಾಂಡಲ್‌ವುಡ್‌ಗೂ ಇದರ ಬಿಸಿ ತಟ್ಟಿದೆ. ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿರುವ ಪ್ರಮುಖ ಆರೋಪಿ ಶಿವಾನಂದ ನೀಲಣ್ಣವರ, ಸಾರ್ವಜನಿಕರ ಹಣವನ್ನು ಸಿನಿಮಾ ರಂಗದಲ್ಲೂ ಹೂಡಿಕೆ ಮಾಡಿರುವ ಸ್ಫೋಟಕ ಮಾಹಿತಿ ಸಿಐಡಿ (CID) ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಬೆಳವಣಿಗೆಯಿಂದಾಗಿ ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟ-ನಟಿಯರ ಹೆಸರು ಈ ಹಗರಣದೊಂದಿಗೆ ತಳುಕು ಹಾಕಿಕೊಂಡಿದ್ದು, ಗಾಂಧಿನಗರದಲ್ಲಿ ಸಂಚಲನ ಮೂಡಿಸಿದೆ.

ಮೂಲಗಳ ಪ್ರಕಾರ, ಆರೋಪಿ ಶಿವಾನಂದ ನೀಲಣ್ಣವರ ಸ್ಯಾಂಡಲ್‌ವುಡ್‌ನ ಕೆಲವು ಪ್ರಮುಖ ನಟ-ನಟಿಯರ ಜೊತೆ ನೇರ ಸಂಪರ್ಕ ಹೊಂದಿದ್ದ ಹಾಗೂ ಸಿನಿಮಾ ನಿರ್ಮಾಣ, ಕಾರ್ಯಕ್ರಮಗಳ ಆಯೋಜನೆ ಮತ್ತು ಇತರ ವ್ಯವಹಾರಗಳ ನೆಪದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಚಿತ್ರರಂಗಕ್ಕೆ ಹರಿಸಿದ್ದ ಎನ್ನಲಾಗಿದೆ. ಇದೀಗ ಸಿಐಡಿ ಅಧಿಕಾರಿಗಳು ಶಿವಂ ಅಸೋಸಿಯೇಟ್ಸ್‌ನ ಬ್ಯಾಂಕ್ ಖಾತೆಗಳು ಹಾಗೂ ಹಣದ ವಹಿವಾಟಿನ ಜಾಲವನ್ನು ಬೆನ್ನತ್ತಿರುವ ಕಾರಣ, ಆರೋಪಿಯೊಂದಿಗೆ ಆರ್ಥಿಕ ವ್ಯವಹಾರ ನಡೆಸಿದ್ದ ಸ್ಟಾರ್ ಕಲಾವಿದರಿಗೆ ನಡುಕ ಶುರುವಾಗಿದೆ. ಯಾವುದೇ ಕ್ಷಣದಲ್ಲಾದರೂ ಸಿಐಡಿಯಿಂದ ವಿಚಾರಣೆಗೆ ನೋಟಿಸ್ ಬರಬಹುದು ಎಂಬ ಆತಂಕದಲ್ಲಿ ಹಲವು ಸೆಲೆಬ್ರಿಟಿಗಳು ಢವಢವ ಎನ್ನುತ್ತಿದ್ದಾರೆ.

ಸದ್ಯ ಬೆಳಗಾವಿಯ ಈ ಬಹುಕೋಟಿ ವಂಚನೆ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಮುಗ್ಧ ಹೂಡಿಕೆದಾರರ ಹಣವನ್ನು ಯಾರೆಲ್ಲಾ ನುಂಗಿ ನೀರು ಕುಡಿದಿದ್ದಾರೆ ಎಂಬುದು ತನಿಖೆಯಿಂದಷ್ಟೇ ಪೂರ್ಣ ಪ್ರಮಾಣದಲ್ಲಿ ಹೊರಬರಬೇಕಿದೆ. ಒಂದು ವೇಳೆ ಸಿಐಡಿ ಅಧಿಕಾರಿಗಳು ಸ್ಯಾಂಡಲ್‌ವುಡ್ ಸ್ಟಾರ್‌ಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿದರೆ, ಚಿತ್ರರಂಗದ ಹಲವು ಕರಾಳ ಮುಖಗಳು ಬಯಲಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಅಮಾಯಕ ಜನರ ಬೆವರು ಮತ್ತು ರಕ್ತದ ಕಮಾಯಿಯಲ್ಲಿ ಮಜಾ ಉಡಾಯಿಸಿದ ಆ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಯಾರು ಎಂಬ ಕುತೂಹಲ ಇದೀಗ ಸಾರ್ವಜನಿಕರಲ್ಲಿ ತೀವ್ರವಾಗಿ ಕಾಡುತ್ತಿದೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్