ಬೆಂಗಳೂರಿನಲ್ಲಿ ಶವ ಸಂಸ್ಕಾರದ ಹೆಸರಿನಲ್ಲೂ ವಂಚನೆ: ಸೈಬರ್ ಕ್ರೈಂ ಪೊಲೀಸರ ಎಂಟ್ರಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಂಚಕರು ಇದೀಗ ಅಮಾನವೀಯ ಮಟ್ಟಕ್ಕೆ ಇಳಿದಿದ್ದು, ಶವ ಸಂಸ್ಕಾರದಂತಹ ಸೂಕ್ಷ್ಮ ವಿಚಾರದಲ್ಲೂ ಗೋಲ್‌ಮಾಲ್ ಮಾಡಲು ಶುರುಮಾಡಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡು ಶೋಕದಲ್ಲಿರುವ ಕುಟುಂಬಗಳಿಗೆ ನೆರವಾಗುವ ನೆಪದಲ್ಲಿ ಆನ್‌ಲೈನ್ ಮೂಲಕ ಹಣ ಲೂಟಿ ಮಾಡುವ ಜಾಲವೊಂದು ನಗರದಲ್ಲಿ ಸಕ್ರಿಯವಾಗಿದೆ. ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಸೈಬರ್ ಕ್ರೈಂ ಪೊಲೀಸರು ಅಖಾಡಕ್ಕಿಳಿದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಶವ ಸಂಸ್ಕಾರಕ್ಕಾಗಿ ವಿದ್ಯುತ್ ಚಿತಾಗಾರಗಳಲ್ಲಿ ಸ್ಲಾಟ್ ಬುಕ್ ಮಾಡಲು ಅಂತರ್ಜಾಲದಲ್ಲಿ ಹುಡುಕುವವರನ್ನು ಗುರಿಯಾಗಿಸಿಕೊಂಡು ಈ ವಂಚನೆ ನಡೆಯುತ್ತಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಥವಾ ಸ್ಥಳೀಯ ಆಡಳಿತದ ಅಧಿಕೃತ ವೆಬ್‌ಸೈಟ್‌ಗಳಂತೆಯೇ ಕಾಣುವ ನಕಲಿ ಜಾಲತಾಣಗಳು ಹಾಗೂ ಲಿಂಕ್‌ಗಳನ್ನು ಸೃಷ್ಟಿಸಿರುವ ವಂಚಕರು, ಆನ್‌ಲೈನ್ ಮೂಲಕ ಸೇವಾ ಶುಲ್ಕ ಅಥವಾ ಮುಂಗಡ ಹಣ ಪಾವತಿಸುವಂತೆ ಕೇಳುತ್ತಾರೆ. ಕಂಗಾಲಾಗಿರುವ ಕುಟುಂಬಗಳು ಈ ನಕಲಿ ವೆಬ್‌ಸೈಟ್‌ಗಳನ್ನು ನಂಬಿ ಹಣ ಕಳೆದುಕೊಂಡು, ಅಂತಿಮ ವಿಧಿವಿಧಾನಗಳಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅಕ್ರಮದ ಬಗ್ಗೆ ಎಚ್ಚೆತ್ತುಕೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು, ಜನರನ್ನು ದಾರಿತಪ್ಪಿಸುತ್ತಿರುವ ನಕಲಿ ವೆಬ್‌ಸೈಟ್‌ಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ವಿಭಾಗಕ್ಕೆ ಅಧಿಕೃತ ದೂರು ದಾಖಲಿಸಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಮತ್ತು ಕೇವಲ ಸರ್ಕಾರದ ಅಧಿಕೃತ ಪೋರ್ಟಲ್‌ಗಳ ಮೂಲಕವೇ ವಿದ್ಯುತ್ ಚಿತಾಗಾರಗಳ ಸ್ಲಾಟ್ ಬುಕ್ ಮಾಡುವಂತೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಸೈಬರ್ ಪೊಲೀಸರು ಸದ್ಯ ಈ ನಕಲಿ ಜಾಲತಾಣಗಳನ್ನು ಬ್ಲಾಕ್ ಮಾಡಲು ಹಾಗೂ ವಂಚಕರನ್ನು ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్