ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಗೂಗಲ್ನಂತಹ ಜಾಗತಿಕ ಟೆಕ್ ದೈತ್ಯ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಒಂದು ದೊಡ್ಡ ಕನಸು. ಇಂತಹದ್ದೇ ಕನಸು ಕಂಡಿದ್ದ ಶಾಲಿನಿ ಎಂಬ ಯುವತಿ, ಸಾಕಷ್ಟು ಏರಿಳಿತಗಳು ಹಾಗೂ ಆತಂಕದ ದಿನಗಳ ನಂತರ ಗೂಗಲ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಶಾಲಿನಿ ಅವರು ಆರಂಭದಲ್ಲಿ ಗೂಗಲ್ ಕ್ಲೌಡ್ನಲ್ಲಿ (Google Cloud) ಇಂಟರ್ನ್ ಆಗಿ ತಮ್ಮ ವೃತ್ತಿಜೀವನವನ್ನು ಶುರುಮಾಡಿದ್ದರು. ತಮ್ಮ ಇಂಟರ್ನ್ಶಿಪ್ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ ೯:೩೦ ರಿಂದ ರಾತ್ರಿ ೯:೩೦ ರವರೆಗೆ ಹಾಗೂ ವಾರಾಂತ್ಯದಲ್ಲೂ ಸಹ ಕಠಿಣ ಶ್ರಮ ವಹಿಸಿ ಕೆಲಸ ಮಾಡಿದ್ದರು. ಅವರ ಸ್ನೇಹಿತರೆಲ್ಲರೂ ಹೈದರಾಬಾದ್ನ ಕೆಫೆಗಳಿಗೆ ಭೇಟಿ ನೀಡಿ ಮೋಜು ಮಾಡುತ್ತಿದ್ದಾಗ, ಶಾಲಿನಿ ಮಾತ್ರ ತಮ್ಮ ಸಂಪೂರ್ಣ ಗಮನವನ್ನು ಕೆಲಸ ಮತ್ತು ಭವಿಷ್ಯದ ಮೇಲೆ ಕೇಂದ್ರೀಕರಿಸಿದ್ದರು.
ಆದರೆ, ಇಂಟರ್ನ್ಶಿಪ್ ಮುಗಿದ ಮೇಲೂ ಅವರ ಹಾದಿ ಸುಲಭವಾಗಿರಲಿಲ್ಲ. ಕಂಪನಿಯಲ್ಲಿ ಉದ್ಯೋಗಿಗಳ ನೇಮಕಾತಿ ಕಡಿತದ (Headcount concerns) ಆತಂಕವಿದ್ದ ಕಾರಣ, ಬ್ಯಾಕಪ್ ಆಗಿ ಇತರೆ ಕಂಪನಿಗಳಲ್ಲಿಯೂ ಉದ್ಯೋಗ ಹುಡುಕಿಕೊಳ್ಳುವಂತೆ ಇಂಟರ್ನ್ಗಳಿಗೆ ಸೂಚಿಸಲಾಗಿತ್ತು. ಈ ಅನಿಶ್ಚಿತತೆಯ ನಡುವೆ ಪ್ರಿ-ಪ್ಲೇಸ್ಮೆಂಟ್ ಆಫರ್ಗಾಗಿ (PPO) ಸುಮಾರು ಐದು ತಿಂಗಳ ಕಾಲ ಕಾಯುವುದು ಶಾಲಿನಿಗೆ ತೀವ್ರ ಮಾನಸಿಕ ಒತ್ತಡ ತಂದಿತ್ತು. ಸುರಕ್ಷತೆಗಾಗಿ ಡಾಯ್ಚ ಬ್ಯಾಂಕ್ (Deutsche Bank) ಸೇರಿದಂತೆ ಇತರೆಡೆ ಉದ್ಯೋಗದ ಆಫರ್ ಪಡೆದುಕೊಂಡಿದ್ದರೂ, ಗೂಗಲ್ ಮೇಲಿನ ಭರವಸೆಯನ್ನು ಅವರು ಬಿಟ್ಟಿರಲಿಲ್ಲ. ಆತಂಕ ಎಷ್ಟಿತ್ತೆಂದರೆ, ಫೋನ್ನಲ್ಲಿ ಇಮೇಲ್ ಬಾರದಿರುವುದನ್ನು ನೋಡಿ ನಿರಾಸೆಗೊಳ್ಳುವುದನ್ನು ತಪ್ಪಿಸಲು ಅವರು ತಮ್ಮ ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯಲಾರಂಭಿಸಿದ್ದರು.
ಹೀಗೆ ಒಂದು ದಿನ ದೆಹಲಿಯ ಸರೋಜಿನಿ ನಗರದಲ್ಲಿ ಶಾಪಿಂಗ್ ಮಾಡುತ್ತಿದ್ದಾಗ, ಪೇಮೆಂಟ್ ಮಾಡಲು ಫೋನ್ಪೇ (PhonePe) ತೆರೆದಾಗ ಶಾಲಿನಿಗೆ ‘ಗೂಗಲ್ ಆಫರ್ ಲೆಟರ್’ ಎಂಬ ಇಮೇಲ್ ಬಂದಿರುವುದು ಕಾಣಿಸಿತು. ಯಾವುದೇ ಮುನ್ಸೂಚನೆ ಅಥವಾ ಕನ್ಫರ್ಮೇಶನ್ ಇಲ್ಲದೆ ನೇರವಾಗಿ ಆಫರ್ ಲೆಟರ್ ಬಂದಿದ್ದನ್ನು ನೋಡಿ, ಇದು ಯಾವುದೋ ನಕಲಿ (ಫೇಕ್) ಇಮೇಲ್ ಇರಬಹುದೆಂದು ಅವರು ಆರಂಭದಲ್ಲಿ ಭಾವಿಸಿದ್ದರು. ತಕ್ಷಣವೇ ಕಳುಹಿಸಿದವರ ಇಮೇಲ್ ಐಡಿ ಹಾಗೂ ಡೊಮೇನ್ ಪರಿಶೀಲಿಸಿದಾಗ ಅದು ನಿಜವಾದ ಗೂಗಲ್ ಆಫರ್ ಲೆಟರ್ ಎಂಬುದು ಖಚಿತವಾಯಿತು. ಈ ಅನಿರೀಕ್ಷಿತ ಸಂತೋಷದ ಸುದ್ದಿ ಕಂಡು ಮಾರುಕಟ್ಟೆಯ ಮಧ್ಯದಲ್ಲೇ ಅವರ ಕಣ್ಣಲ್ಲಿ ಆನಂದಭಾಷ್ಪ ಜಿನುಗಿತ್ತು. ತಾನು ಪಟ್ಟ ಕಷ್ಟ, ಆತಂಕದ ದಿನಗಳು ಹಾಗೂ ವಾರಾಂತ್ಯದ ಬಿಡುವಿಲ್ಲದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಅವರು ತಮ್ಮ ಈ ಭಾವನಾತ್ಮಕ ಹಾಗೂ ಸ್ಪೂರ್ತಿದಾಯಕ ಪಯಣವನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.









