ಪ್ರಮುಖ ಜಾಗತಿಕ ಬ್ರ್ಯಾಂಡ್ಗಳ ರಾಯಭಾರಿಯಾಗಿ (Brand Ambassador) ಕೋಟ್ಯಂತರ ರೂಪಾಯಿ ಜಾಹೀರಾತುಗಳಲ್ಲಿ ಮಿಂಚುವ ಸೌತ್ ಸೂಪರ್ಸ್ಟಾರ್ ನಟಿ ತ್ರಿಷಾ ಕೃಷ್ಣನ್, ಇದೀಗ ಹೆಸರಾಂತ ಫ್ಯಾಷನ್ ಬ್ರ್ಯಾಂಡ್ ಒಂದರ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಫ್ಯಾಷನ್ ಐಕಾನ್ ಆಗಿರುವ ನಟಿಗೇ ಅಂತರರಾಷ್ಟ್ರೀಯ ಬ್ರ್ಯಾಂಡ್ ಒಂದು ಅಸಹ್ಯಕರ ಅನುಭವ ಆಗಿದೆ. ತಮಗೆ ಬಂದ ಹೋಮ್ ಡೆಲಿವರಿ ಬಟ್ಟೆಗಳ ಬಗ್ಗೆ ಆಕ್ರೋಶ ಹೊರಹಾಕಿರುವ ತ್ರಿಷಾ, ಸೋಷಿಯಲ್ ಮೀಡಿಯಾದಲ್ಲಿ ಆ ಬ್ರ್ಯಾಂಡ್ನ ಇಮೇಜ್ ಅನ್ನು ಧೂಳೀಪಟ ಮಾಡಿದ್ದಾರೆ. ಇಷ್ಟಕ್ಕೂ ತ್ರಿಷಾಗೆ ಆದ ಆ ಕೆಟ್ಟ ಅನುಭವ ಏನು ಗೊತ್ತಾ?
ನಟಿ ತ್ರಿಷಾ ಕೃಷ್ಣನ್ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ತಮ್ಮ ಅತ್ಯುತ್ತಮ ನಟನೆಯ ಮೂಲಕ ಸದಾ ಸುದ್ದಿಯಲ್ಲಿರುವ ತ್ರಿಷಾ, ಈ ಬಾರಿ ಜಾಗತಿಕ ಮಟ್ಟದ ಪ್ರಖ್ಯಾತ ಫ್ಯಾಷನ್ ಬ್ರ್ಯಾಂಡ್ 'ಝಾರಾ' (Zara) ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ತಮಗೆ ಡೆಲಿವರಿ ಆದ ಬಟ್ಟೆಗಳ ಬಗ್ಗೆ ನಟಿ ಮಾಡಿರುವ ಕಂಪ್ಲೇಂಟ್ ಕೇಳಿ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ.
"ಬಟ್ಟೆ ಪ್ಯಾಕ್ ಮಾಡುವ ಮುನ್ನ ಒಮ್ಮೆ ಮೂಸಿ ನೋಡಿ"
ನಟಿ ತ್ರಿಷಾ ಇತ್ತೀಚೆಗೆ 'ಝಾರಾ' ಬ್ರ್ಯಾಂಡ್ನಿಂದ ಆನ್ಲೈನ್ ಮೂಲಕ ಕೆಲವು ಬಟ್ಟೆಗಳನ್ನು ಆರ್ಡರ್ ಮಾಡಿದ್ದರು. ಆದರೆ ಮನೆಗೆ ಬಂದ ಬಟ್ಟೆಗಳನ್ನು ನೋಡಿದ ನಟಿಗೆ ತೀವ್ರ ಅಸಹ್ಯ ಉಂಟಾಗಿದೆ. ಬಟ್ಟೆಗಳಿಂದ ದೇಹದ ಬೆವರಿನ ವಾಸನೆ ಬರುತ್ತಿರುವುದನ್ನು ಗಮನಿಸಿದ ಅವರು, ತಕ್ಷಣವೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬ್ರ್ಯಾಂಡ್ನ ಅಧಿಕೃತ ಖಾತೆಗಳನ್ನು ಟ್ಯಾಗ್ ಮಾಡಿ ಕ್ಲಾಸ್ ತಗೊಂಡಿದ್ದಾರೆ.
"ಡಿಯರ್ ಝಾರಾ... ಮುಂದಿನ ಬಾರಿ ಹೋಮ್ ಡೆಲಿವರಿ ಕಳುಹಿಸುವ ಮುನ್ನ ಬಟ್ಟೆಗಳಿಂದ ಇಂಚೂ ಕೂಡ ಬೆವರಿನ ವಾಸನೆ ಬಾರದಂತೆ ದಯವಿಟ್ಟು ಗಮನಿಸಿ. ಇದು ಸತತ ಮೂರನೇ ಬಾರಿ ನನಗೆ ಈ ರೀತಿ ಆಗ್ತಿರೋದು. ನಿಜಕ್ಕೂ ಇದು ತುಂಬಾ ಅಸಹ್ಯಕರವಾಗಿದೆ. ಬಟ್ಟೆಗಳನ್ನು ಪ್ಯಾಕ್ ಮಾಡುವ ಮುನ್ನ ಕನಿಷ್ಠ ಪಕ್ಷ ಅದರ ವಾಸನೆ ನೋಡಿ (Smell it before you pack it)." ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರಾಹಕರು ಬಟ್ಟೆಗಳನ್ನು ಟ್ರಯಲ್ ರೂಮ್ನಲ್ಲಿ ಧರಿಸಿ ನೋಡಿದಾಗ ಅಥವಾ ರಿಟರ್ನ್ ಮಾಡಿದ ಬಟ್ಟೆಗಳನ್ನು ಸರಿಯಾಗಿ ಪರಿಶೀಲಿಸದೆ ಹಾಗೇ ಪ್ಯಾಕ್ ಮಾಡಿದಾಗ ಇಂತಹ ಘಟನೆಗಳು ನಡೆಯುತ್ತವೆ. ಸದ್ಯ ತ್ರಿಷಾ ಮಾಡಿರುವ ಈ ಪೋಸ್ಟ್ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಬ್ರ್ಯಾಂಡ್ ವಿರುದ್ಧ ಕಾಮೆಂಟ್ ಮಾಡುತ್ತಿದ್ದಾರೆ.
ತ್ರಿಷಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ವಿಷಯವನ್ನು ಹಂಚಿಕೊಂಡಿದ್ದಾರೆ. ಮಹಿಳೆಯರಲ್ಲಿ ವಯಸ್ಸಾಗುತ್ತಿದ್ದಂತೆ ಕಂಡುಬರುವ 'ಪೆರಿಮೆನೋಪಾಸ್' (ಮುಟ್ಟು ನಿಲ್ಲುವ ಮುನ್ನಾದಿನಗಳು) ಹಂತದ ಬಗ್ಗೆಯೂ ಅವರು ಪೋಸ್ಟ್ ಮಾಡಿದ್ದಾರೆ. "ವೈದ್ಯರೊಬ್ಬರು ಹೇಳಿದಂತೆ, ಪೆರಿಮೆನೋಪಾಸ್ ಹಂತ ತಲುಪಿದಾಗ ಮಹಿಳೆಯರಲ್ಲಿ ಇತರರನ್ನು ಮೆಚ್ಚಿಸುವ ಹಾರ್ಮೋನ್ಗಳು ಕಡಿಮೆಯಾಗಿ, 'ನನಗೇನು ಕಾಳಜಿಯಿಲ್ಲ' ಎಂಬ ಹಾರ್ಮೋನ್ಗಳು ಹೆಚ್ಚಾಗುತ್ತವೆ" ಎಂಬ ಬರಹವನ್ನು ಶೇರ್ ಮಾಡಿ, ಅದಕ್ಕೆ 'Fact' (ನಿಜ) ಎಂಬ ಸ್ಟಿಕ್ಕರ್ ಹಾಕಿದ್ದಾರೆ. ಸಿನಿಮಾ ರಂಗದಲ್ಲಿ ನಟಿಯರು ತಮ್ಮ ವಯಸ್ಸನ್ನು ಮುಚ್ಚಿಡುವ ಕಾಲದಲ್ಲಿ, 43 ವರ್ಷದ ತ್ರಿಷಾ ಇಷ್ಟು ಮುಕ್ತವಾಗಿ ಈ ವಿಷಯ ಹಂಚಿಕೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ 'ಕರುಪ್ಪು'
ನಟಿ ತ್ರಿಷಾ ಅವರ ವೃತ್ತಿಜೀವನ ಪ್ರಸ್ತುತ ಸುವರ್ಣ ಯುಗದಲ್ಲಿದೆ ಎನ್ನಬಹುದು. ಇತ್ತೀಚೆಗಷ್ಟೇ ಬಿಡುಗಡೆಯಾದ ಸೂರ್ಯ ಮತ್ತು ತ್ರಿಷಾ ನಟನೆಯ, ಆರ್ಜೆ ಬಾಲಾಜಿ ನಿರ್ದೇಶನದ 'ಕರುಪ್ಪು' (Karuppu) ಫ್ಯಾಂಟಸಿ ಕೋರ್ಟ್ರೂಮ್ ಡ್ರಾಮಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು 2026ರ ತಮಿಳು ಚಿತ್ರರಂಗದ ಅತಿ ದೊಡ್ಡ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. 'ಪೊನ್ನಿಯಿನ್ ಸೆಲ್ವನ್' ಮತ್ತು 'ಲಿಯೋ' ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ತ್ರಿಷಾ ಖಾತೆಗೆ ಮತ್ತೊಂದು ಬ್ಲಾಕ್ಬಸ್ಟರ್ ಸಿನಿಮಾ ಸೇರಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಎಮ ದಳಪತಿ ವಿಜಯ್ ಜೊತೆಗಿನ ಅವರ ಸ್ನೇಹದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಭಾರಿ ಗಾಸಿಪ್ಗಳು ಚರ್ಚೆಯಲ್ಲಿವೆ.









