ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪರಾಕ್' ಚಿತ್ರದ ಟೀಸರ್ ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡ ಟೀಸರ್ ಅನಾವರಣಗೊಳಿಸಿತು. ಈ ವೇಳೆ ಮಾತನಾಡಿದ ನಿರ್ದೇಶಕ ಹಾಲೇಶ್ ಕೊಗುಂಡಿ, ಇದು ಕೇವಲ ಟೀಸರ್ ಮಾತ್ರವಾಗಿದ್ದು, ಸಿನಿಮಾದಲ್ಲಿ ಇನ್ನೂ ಸಾಕಷ್ಟು ಅಚ್ಚರಿಯ ಅಂಶಗಳಿವೆ ಎಂದು ಹೇಳಿದರು. ಶ್ರೀಮುರಳಿ ಅವರೊಂದಿಗೆ ಕೆಲಸ ಮಾಡಿರುವುದು ಸಂತೋಷ ತಂದಿದ್ದು, ಪ್ರೇಕ್ಷಕರ ಬೆಂಬಲ ಇರಲಿ ಎಂದು ಮನವಿ ಮಾಡಿದರು.
ನಟ ಶ್ರೀಮುರಳಿ ಮಾತನಾಡಿ, 'ಪರಾಕ್' ಸುಲಭವಾಗಿ ಮೂಡಿಬಂದ ಸಿನಿಮಾ ಅಲ್ಲ ಎಂದು ಹೇಳಿದರು. ಟೀಸರ್ ಹಿಂದೆ ಅಪಾರ ಶ್ರಮವಿದ್ದು, ಅನೇಕ ಸಭೆಗಳು ಮತ್ತು ಚರ್ಚೆಗಳ ಬಳಿಕ ಚಿತ್ರ ರೂಪುಗೊಂಡಿದೆ. ಸಿನಿಮಾವನ್ನು ನಿರ್ಮಿಸಲು ಸುಮಾರು ಎರಡೂವರೆ ವರ್ಷಗಳ ಸಮಯ ತೆಗೆದುಕೊಂಡಿದ್ದು, ಕಥೆಯ ಅಭಿವೃದ್ಧಿಗೇ ಮೂರೂವರೆ ವರ್ಷ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.
ಹೊಸ ನಿರ್ದೇಶಕ ಹಾಗೂ ಹೊಸ ನಿರ್ಮಾಣ ಸಂಸ್ಥೆಯೊಂದಿಗೆ ಸಿನಿಮಾ ಮಾಡಿರುವುದಕ್ಕೆ ಕಾರಣವನ್ನೂ ಶ್ರೀಮುರಳಿ ವಿವರಿಸಿದರು. ಹೊಸ ಪ್ರತಿಭೆಗಳು ಮತ್ತು ಅವರ ಹೊಸ ಆಲೋಚನೆಗಳು ತಮ್ಮನ್ನು ಆಕರ್ಷಿಸುತ್ತವೆ ಎಂದು ಹೇಳಿದ ಅವರು, ಹೊಸಬರನ್ನು ನಂಬುವುದರಿಂದಲೇ ಇಂತಹ ವಿಭಿನ್ನ ಪ್ರಯತ್ನಗಳಿಗೆ ಕೈಹಾಕುತ್ತೇನೆ ಎಂದು ಹೇಳಿದರು. ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.









