ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಇಂದು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮಕ್ಕೆ ಭೇಟಿ ನೀಡಿದರು. ಗಡಿಭಾಗದ ಬೆಳಗಾವಿಯಿಂದ ವಿಜಯಪುರಕ್ಕೆ ತೆರಳುವ ಮಾರ್ಗಮಧ್ಯೆ ಅವರು ಕಲಾದಗಿಯ ಸಂಘದ ಯುವ ಕಾರ್ಯಕರ್ತ ಡಾ. ಪ್ರವೀಣ್ ಭಜಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಗಮನ ಸೆಳೆದರು.
ಮೋಹನ್ ಭಾಗವತ್ ಅವರ ಭೇಟಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ದೇಶದ ಅತ್ಯುನ್ನತ Z+ ಭದ್ರತಾ ವ್ಯವಸ್ಥೆಯೊಂದಿಗೆ ಅವರು ಗ್ರಾಮಕ್ಕೆ ಆಗಮಿಸಿದ್ದು, ಭದ್ರತಾ ಸಿಬ್ಬಂದಿ ಸಂಪೂರ್ಣ ಎಚ್ಚರಿಕೆ ವಹಿಸಿದ್ದರು.
ಕಲಾದಗಿಗೆ ಆಗಮಿಸಿದ ಬಳಿಕ ಮೋಹನ್ ಭಾಗವತ್ ನೇರವಾಗಿ ಡಾ. ಪ್ರವೀಣ್ ಭಜಂತ್ರಿ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿಯಾಗಿ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದರು. ಅವರ ಭೇಟಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕುತೂಹಲದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.









