ಉತ್ತರ ಪ್ರದೇಶದ ನೋಯ್ಡಾದ ಮಾಮುರಾ ಗ್ರಾಮದಲ್ಲಿರುವ ನಾಲ್ಕು ಮಹಡಿಗಳ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಕಟ್ಟಡದ ನೆಲಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಇಡೀ ಕಟ್ಟಡಕ್ಕೆ ವ್ಯಾಪಿಸಿ, ದಟ್ಟ ಹೊಗೆಯಿಂದ ನಿವಾಸಿಗಳು ಆತಂಕಕ್ಕೆ ಒಳಗಾದರು.
ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯುತ್ ಚಾಲಿತ ವಾಹನ (ಇವಿ) ಚಾರ್ಜ್ ಮಾಡುವ ವೇಳೆ ಕಿಡಿ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿದ್ದ ಪೆಟ್ರೋಲ್ ವಾಹನಗಳಿಗೂ ಬೆಂಕಿ ವ್ಯಾಪಿಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹೊಗೆ ಮೇಲಿನ ಮಹಡಿಗಳಿಗೂ ಹರಡಿತು.
ಮಾಹಿತಿ ಪಡೆದ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಏಳು ಅಗ್ನಿಶಾಮಕ ವಾಹನಗಳು, ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ಮತ್ತು ವಿಶೇಷ ರಕ್ಷಣಾ ವಾಹನಗಳ ನೆರವಿನಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಕಟ್ಟಡದಲ್ಲಿದ್ದ ಸುಮಾರು 50 ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಘಟನೆಯ ಕುರಿತು ತನಿಖೆ ಮುಂದುವರಿದಿದೆ.









