ಪಶ್ಚಿಮ ಬಂಗಾಳದ ಹೌರಾದ 15 ವರ್ಷದ ರಾಷ್ಟ್ರೀಯ ಮಟ್ಟದ ಶೂಟರ್ ದಮಯಂತಿ ಸೇನ್ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ. ಜುಲೈ 16ರಂದು ಮಧ್ಯಾಹ್ನ ಮನೆಗೆ ಬೇಕಾದ ದಿನಸಿ ಸಾಮಾನು ತರಲು ಹೊರಟಿದ್ದ ದಮಯಂತಿ ಬಳಿಕ ಮನೆಗೆ ವಾಪಸ್ ಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಸ್ನೇಹಿತರು, ಶೂಟಿಂಗ್ ಸಹಚರರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹೌರಾ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಯಲ್ಲಿ ದಮಯಂತಿ ನಾಲ್ಕನೇ ಮತ್ತು ಐದನೇ ಪ್ಲಾಟ್ಫಾರ್ಮ್ಗಳ ನಡುವೆ ಸಂಚರಿಸುತ್ತಿರುವುದು ಪತ್ತೆಯಾಗಿದೆ. ಮನೆಯಿಂದ ಹೊರಡುವಾಗ ಅವರ ಬಳಿ ಮೊಬೈಲ್ ಫೋನ್ ಇದ್ದರೂ, ಪ್ರಸ್ತುತ ಅದು ಸಂಪರ್ಕಕ್ಕೆ ಸಿಗುತ್ತಿಲ್ಲ. ಯುವ ಶೂಟರ್ನ ಸುಳಿವು ಪತ್ತೆಹಚ್ಚಲು ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.









