ಉದ್ಯಾನ ನಗರಿ ಬೆಂಗಳೂರುದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಕುರಿತು ಮಹತ್ವದ ಸಮೀಕ್ಷಾ ವರದಿ ಪ್ರಕಟವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 142 ಸಾರ್ವಜನಿಕ ಶೌಚಾಲಯಗಳ ಕುರಿತು ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (B.PAC) ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ.
ಈ ಸಮೀಕ್ಷೆಯನ್ನು 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿ-ಪ್ಯಾಕ್ನ ನಾಗರಿಕ ನಾಯಕರು, ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿದ್ಯಾರ್ಥಿ ಸ್ವಯಂಸೇವಕರು ನಡೆಸಿದ್ದಾರೆ. ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಸ್ವಚ್ಛತೆ, ಸುರಕ್ಷತೆ, ಪ್ರವೇಶ ಸೌಲಭ್ಯ, ಪಾರದರ್ಶಕತೆ ಹಾಗೂ ಸೇವೆಯ ಗುಣಮಟ್ಟ ಸೇರಿದಂತೆ ವಿವಿಧ ಅಂಶಗಳ ಕುರಿತು ಸಮಗ್ರ ಮೌಲ್ಯಮಾಪನ ಮಾಡಲಾಗಿದೆ.
ಈ ವರದಿ ನಗರದ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯಲ್ಲಿ ಸುಧಾರಣೆಯ ಅಗತ್ಯವಿರುವ ಹಲವು ಅಂಶಗಳನ್ನು ಬೆಳಕಿಗೆ ತಂದಿದ್ದು, ನಾಗರಿಕರಿಗೆ ಉತ್ತಮ ಹಾಗೂ ಸುರಕ್ಷಿತ ಮೂಲಸೌಕರ್ಯ ಒದಗಿಸಲು ಸಂಬಂಧಿತ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಿ-ಪ್ಯಾಕ್ ಒತ್ತಾಯಿಸಿದೆ.









