ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಮತ್ತೊಂದು ಶಾಕ್ ನೀಡಿದೆ. ಮೆಟ್ರೋ ಪ್ರಯಾಣ ದರವನ್ನು ಮೂರು ವರ್ಷಕ್ಕೊಮ್ಮೆ ಶೇ.12ರಷ್ಟು ಹೆಚ್ಚಿಸುವ ಹೊಸ ಪ್ರಸ್ತಾವನೆಯನ್ನು ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾಪ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಮೆಟ್ರೋ ಪ್ರಯಾಣ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
ಈ ಮೊದಲು ದರ ಪರಿಷ್ಕರಣಾ ಸಮಿತಿ ಪ್ರತಿ ವರ್ಷ ಶೇ.5ರಷ್ಟು ಟಿಕೆಟ್ ದರ ಹೆಚ್ಚಿಸುವಂತೆ ಶಿಫಾರಸು ಮಾಡಿತ್ತು. ಆದರೆ ಬಿಎಂಆರ್‌ಸಿಎಲ್ ವಾರ್ಷಿಕ ಏರಿಕೆಯ ಬದಲು ಮೂರು ವರ್ಷಕ್ಕೊಮ್ಮೆ ಒಮ್ಮೆಲೇ ಶೇ.12ರಷ್ಟು ದರ ಪರಿಷ್ಕರಣೆ ಮಾಡುವ ಹೊಸ ಮಾದರಿಯನ್ನು ಅನುಸರಿಸಲು ಮುಂದಾಗಿದೆ.
ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ ಬಳಿಕ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಈ ಬೆಳವಣಿಗೆ ಸಾರ್ವಜನಿಕ ಸಾರಿಗೆ ಬಳಸುವ ಲಕ್ಷಾಂತರ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಪ್ರಯಾಣ ದರ ಏರಿಕೆ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿವೆ.









