ಈಜಿಪ್ಟ್ನ ಡಾಮಿಯೆಟ್ಟಾ ಬಂದರಿನಲ್ಲಿ ಅಮೆರಿಕ ಒಡೆತನದ ದ್ರವೀಕೃತ ನೈಸರ್ಗಿಕ ಅನಿಲ (LNG) ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿರುವುದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬುಧವಾರ ಸರಕು ಇಳಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಡ್ರೋನ್ ಟ್ಯಾಂಕರ್ಗೆ ಅಪ್ಪಳಿಸಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
ಸ್ಫೋಟ ಸಂಭವಿಸಿದ ತಕ್ಷಣ ಸ್ಥಳೀಯ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ ಎಂದು ಬಂದರು ಸೇವಾ ಸಂಸ್ಥೆ ‘ಇಂಚ್ಕೇಪ್’ ತಿಳಿಸಿದೆ. ಘಟನೆಯ ಬಳಿಕ ಬಂದರು ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದ ನೌಕೆಗಳನ್ನು ಸುರಕ್ಷತಾ ಕ್ರಮವಾಗಿ ಬಂದರು ಪ್ರದೇಶದಿಂದ ಹೊರಕ್ಕೆ ಸ್ಥಳಾಂತರಿಸಲಾಗಿದೆ. ಉಳಿದ ಬರ್ತ್ಗಳು ಹಾಗೂ ಟರ್ಮಿನಲ್ಗಳಲ್ಲಿ ಕಾರ್ಯಾಚರಣೆಗಳನ್ನು ರಾತ್ರಿ ವೇಳೆಗೆ ಪುನರಾರಂಭಿಸುವ ನಿರೀಕ್ಷೆಯಿದ್ದು, ದಾಳಿಯ ಕುರಿತು ತನಿಖೆ ಮುಂದುವರಿದಿದೆ.









