ಬೆಂಗಳೂರು: ಬೈಕ್ ಟ್ಯಾಕ್ಸಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ₹20 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ವೆಚ್ಚವಾದ ಹಿನ್ನೆಲೆಯಲ್ಲಿ ಬೆಂಗಳೂರಿನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಅವರು ರ‍್ಯಾಪಿಡೋ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಕೇರಳ ಮೂಲದ ಸಾನಿ ಕೃಷ್ಣ ಅವರು ಜೂನ್ 17ರಂದು ಬೈರಸಂದ್ರದಲ್ಲಿರುವ ತಮ್ಮ ಮನೆಯಿಂದ ಡೊಮ್ಲೂರಿನ ಕಚೇರಿಗೆ ರ‍್ಯಾಪಿಡೋ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಾಗ್ಮನೆ ಟೆಕ್ ಪಾರ್ಕ್ ಸಮೀಪದ ಕಿರಿದಾದ ರಸ್ತೆಯಲ್ಲಿ ಬೈಕ್ ಸವಾರ ವೇಗವಾಗಿ ಟ್ರ್ಯಾಕ್ಟರ್ ಅನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಾನಿ ಅವರಿಗೆ ಚಿಕಿತ್ಸೆಗಾಗಿ ₹20 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಪಘಾತಕ್ಕೆ ಹೊಣೆಗಾರಿಕೆ ನಿಗದಿಪಡಿಸಿ ಪರಿಹಾರ ಪಡೆಯಲು ರ‍್ಯಾಪಿಡೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವರು ಮುಂದಾಗಿದ್ದಾರೆ.









