ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರು ಇದೀಗ ಸ್ಪೇಸ್ ಟೆಕ್ ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ದೇಶದಲ್ಲಿ ಅತಿ ಹೆಚ್ಚು ಹೂಡಿಕೆ ಪಡೆದಿರುವ 10 ಪ್ರಮುಖ ಸ್ಪೇಸ್ ಟೆಕ್ ಕಂಪನಿಗಳ ಪೈಕಿ 7 ಕಂಪನಿಗಳು ಬೆಂಗಳೂರಿನಲ್ಲಿ ನೆಲೆ ಹೊಂದಿವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇದರಿಂದ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಬೆಂಗಳೂರಿನ ಸ್ಥಾನ ಮತ್ತಷ್ಟು ಬಲಗೊಂಡಿದೆ.
ಬೆಂಗಳೂರು 106 ಹೂಡಿಕೆ ಸುತ್ತುಗಳ ಮೂಲಕ ಸುಮಾರು 495 ಮಿಲಿಯನ್ ಡಾಲರ್ ಬಂಡವಾಳವನ್ನು ಆಕರ್ಷಿಸಿದೆ. ಇದು ಭಾರತದ ಒಟ್ಟು ಸ್ಪೇಸ್ ಟೆಕ್ ಹೂಡಿಕೆಯ ಶೇ.57ರಷ್ಟು ಪಾಲಾಗಿದೆ. ಸ್ಟಾರ್ಟ್‌ಅಪ್‌ಗಳು, ಖಾಸಗಿ ಬಾಹ್ಯಾಕಾಶ ಕಂಪನಿಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳ ಬೆಳವಣಿಗೆಗೆ ಬೆಂಗಳೂರು ಪ್ರಮುಖ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.
ಕರ್ನಾಟಕದ ಐಟಿಬಿಟಿ ಇಲಾಖೆಯ ಸ್ಪೇಸ್ ಟೆಕ್ ನೀತಿಯಡಿ 2033ರ ವೇಳೆಗೆ ಭಾರತದ 44 ಬಿಲಿಯನ್ ಡಾಲರ್ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಶೇ.50ರಷ್ಟು ಪಾಲು ಪಡೆಯುವ ಗುರಿ ಹೊಂದಲಾಗಿದೆ. ಈ ನೀತಿಯ ಮೂಲಕ ಅನುದಾನ, ಆರ್ಥಿಕ ನೆರವು ಮತ್ತು Centre of Excellence ಸಹಾಯದಿಂದ ಕರ್ನಾಟಕದ 500 ಸ್ಟಾರ್ಟ್‌ಅಪ್‌ಗಳು ಹಾಗೂ MSMEಗಳಿಗೆ ಬೆಂಬಲ ನೀಡಲಾಗುತ್ತದೆ. ವಿನ್ಯಾಸ, ಉತ್ಪಾದನೆ, ಏಕೀಕರಣ, ಪರೀಕ್ಷೆ ಸೇರಿದಂತೆ ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.









