ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ರಾಜಸ್ಥಾನ ಮೂಲದ ಯುವತಿಯನ್ನು ಕುಟುಂಬದವರ ಬಳಿಗೆ ಕರೆತರಲು ಬಂದಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ಯುವ ವೇಳೆ ರ‍್ಯಾಶ್ ಡ್ರೈವಿಂಗ್ ಮಾಡಿದ್ದು, ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜಸ್ಥಾನ ಮೂಲದ 21 ವರ್ಷದ ಪೂಜಾ, ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ 23 ವರ್ಷದ ಯುವಕನನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಈ ವಿಚಾರ ಕುಟುಂಬದವರಿಗೆ ತಿಳಿದ ಬಳಿಕ, ಆಕೆಯನ್ನು ಕರೆತರಲು ನಾಲ್ವರನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಅವರು ಪೂಜಾಳನ್ನು ಪತಿಯಿಂದ ಬೇರ್ಪಡಿಸಿ ಕಾರಿನಲ್ಲಿ ಕರೆದೊಯ್ಯಲು ಮುಂದಾಗಿದ್ದರು.
ಬುಧವಾರ ನಡೆದ ಘಟನೆಯಲ್ಲಿ ಕಾರು ಕೆಲವರಿಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಮಕ್ಕಳೂ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಕಾರು ಕೆಲವರ ಮೇಲೆ ಹರಿದಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.








