ಕನ್ನಡದ ವರನಟ ಡಾ. ರಾಜ್‌ಕುಮಾರ್ ಅಭಿನಯದ ಸೂಪರ್‌ಹಿಟ್ ಚಿತ್ರ ‘ಜಗಮೆಚ್ಚಿದ ಮಗ’ ಇದೀಗ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಕಪ್ಪು-ಬಿಳುಪಿನಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ಆಧುನಿಕ ತಂತ್ರಜ್ಞಾನ ಬಳಸಿ ಕಲರ್‌ಗೆ ಪರಿವರ್ತಿಸಲಾಗುತ್ತಿದೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ‘ಜಗಮೆಚ್ಚಿದ ಮಗ’ ಚಿತ್ರವನ್ನು ಕಲರ್‌ನಲ್ಲಿ ಮರುಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಡಾ. ರಾಜ್‌ಕುಮಾರ್ ಅವರ ಅಭಿನಯವನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಇದು ಅವಕಾಶವಾಗಲಿದೆ.
ನಿರ್ಮಾಪಕ ಹಾಗೂ ವಿತರಕರಾಗಿ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎಸ್. ಉದಯಶಂಕರ್ ಅವರು ಈ ಚಿತ್ರವನ್ನು ಕಲರ್‌ನಲ್ಲಿ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಳೆಯ ಸಿನಿಮಾವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶ ಹೊಂದಿದ್ದಾರೆ.








