ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮೂಲಸೌಕರ್ಯಗಳ ನಿರ್ವಹಣೆ, ಸುಗಮ ಸಂಚಾರ ಹಾಗೂ ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷತೆಯ ವಾಸ್ತವ ಸ್ಥಿತಿಗತಿ ಪರಿಶೀಲಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ ಎನ್ ರಮೇಶ್ ರವರು ಪಾಲಿಕೆ ವ್ಯಾಪ್ತಿಯ ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಹೊರ ವರ್ತುಲ ರಸ್ತೆ ಹಾಗೂ ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ನೈಸ್ ರಸ್ತೆ ಜಂಕ್ಷನ್‌ವರಗೆ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದರು.
ಪರಿಶೀಲನೆಯುದ್ದಕ್ಕೂ ಬೀದಿ ದೀಪಗಳ ವೈಫಲ್ಯ, ಪಾದಚಾರಿ ಮಾರ್ಗಗಳ (ಫುಟ್‌ಪಾತ್) ದುಃಸ್ಥಿತಿ, ತೆರೆದ ಚರಂಡಿಗಳು ಮತ್ತು ಎಂಜಿನಿಯರ್‌ಗಳ ಹೊಣೆಗೇಡಿತನಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡರು.
ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಗೊಟ್ಟಿಗೆರೆವರೆಗಿನ ಈ ಪ್ರಮುಖ ಮಾರ್ಗದಲ್ಲಿ ಒಟ್ಟು 1,540 ಬೀದಿ ದೀಪಗಳಿದ್ದು, ಇದರಲ್ಲಿ 1,010 ದೀಪಗಳು ಮಾತ್ರ ಉರಿಯುತ್ತಿವೆ. ಬರೋಬ್ಬರಿ 530 ದೀಪಗಳು, ಅಂದರೆ ಶೇಕಡಾ 34ರಷ್ಟು ಬೀದಿ ದೀಪಗಳು ಸಂಪೂರ್ಣವಾಗಿ ಕೆಟ್ಟುಹೋಗಿವೆ ಎಂದು ಸಚಿವರು ಅಂಕಿಅಂಶಗಳ ಸಮೇತ ಬಹಿರಂಗಪಡಿಸಿದರು.
ಕಳೆದ ಸೆಪ್ಟೆಂಬರ್ 7 ಮತ್ತು 15 ರಂದು ತಮ್ಮ ಕಚೇರಿಯ ಸಿಬ್ಬಂದಿ ಮೂಲಕ ರಾತ್ರಿ ವೇಳೆ ಸಮೀಕ್ಷೆ ನಡೆಸಲಾಗಿದ್ದು, ಸತತ 11 ದಿನಗಳಿಂದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಜುಲೈ 3 ಮತ್ತು ಆಗಸ್ಟ್ ತಿಂಗಳಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿ, ಈಗಾಗಲೇ ಒಬ್ಬ ಎಂಜಿನಿಯರ್ ಅನ್ನು ಅಮಾನತು ಮಾಡಿದ್ದರೂ ಸಹ ಗ್ರೌಂಡ್ ಲೆವೆಲ್‌ನಲ್ಲಿ ಯಾವುದೇ ಸುಧಾರಣೆ ಕಾಣದಿರುವುದನ್ನು ಸಚಿವರು ಗಂಭೀರವಾಗಿ ಆಕ್ಷೇಪಿಸಿದರು.
ಎಲ್‌ಇಡಿ ಲೈಟ್ ಅಳವಡಿಕೆ ಗುತ್ತಿಗೆ ಅವಧಿ ಕಳೆದ ಫೆಬ್ರವರಿಗೆ ಮುಕ್ತಾಯವಾಗಿದ್ದರೂ, ವಿಸ್ತರಿತ ಅವಧಿಯಲ್ಲೂ ಗುತ್ತಿಗೆದಾರರು ಕಾಮಗಾರಿ ಮುಗಿಸಿಲ್ಲ. ರಸ್ತೆಯ ಅಗಲಕ್ಕೆ ತಕ್ಕಂತೆ 120 ವ್ಯಾಟ್ಸ್ ದೀಪಗಳನ್ನು ಅಳವಡಿಸದೆ, 90 ವ್ಯಾಟ್ಸ್ ಹಳೆಯ ದೀಪಗಳನ್ನೇ ಮುಂದುವರಿಸಲಾಗಿದೆ. ಹೈ-ಡೆನ್ಸಿಟಿ ಲೈಟ್‌ಗಳು ಮತ್ತು ಮೀಡಿಯನ್ ದೀಪಗಳು ಉರಿಯುತ್ತಿಲ್ಲ.
ಹುಳಿಮಾವು ಬಳಿಯ ಕ್ರೈಸ್ಟ್ ಯೂನಿವರ್ಸಿಟಿ ಮುಂಭಾಗ ಹಾಗೂ ಮೆಗಾ ಸಿಟಿ ಮಾಲ್ ಬಳಿ ರಸ್ತೆಯುದ್ದಕ್ಕೂ ಸಂಪೂರ್ಣ ಕತ್ತಲು ಆವರಿಸಿರುವುದನ್ನು ಅಧಿಕಾರಿಗಳಿಗೆ ತೋರಿಸಿದ ಸಚಿವರು, "ರಾತ್ರಿ ವೇಳೆ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ರೌಂಡ್ಸ್ ಮಾಡುತ್ತಿದ್ದಾರೋ ಅಥವಾ ಕಚೇರಿಯಲ್ಲಿ ಸುಳ್ಳು ರಿಪೋರ್ಟ್ ಸಿದ್ಧಪಡಿಸುತ್ತಿದ್ದಾರೋ? ಕೆಲಸ ಮಾಡದ ಗುತ್ತಿಗೆದಾರರ ದುಪ್ಪಟ್ಟು ದಂಡ ವಿಧಿಸಿ ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲು ಹಿಂಜರಿಯಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಾದಚಾರಿ ಮಾರ್ಗಗಳ ಶೋಚನೀಯ ಸ್ಥಿತಿಯನ್ನು ಕಂಡು ಕೆಂಡಾಮಂಡಲರಾದ ಸಚಿವರು, ವೇಗಾ ಸಿಟಿ ಮಾಲ್ ಜಂಕ್ಷನ್, ನಾಗಾರ್ಜುನ ಹೋಟೆಲ್ ಎದುರು ಮತ್ತು ಎಂಪೈರ್ ಹೋಟೆಲ್ ಬಳಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಫುಟ್‌ಪಾತ್ ಮೇಲೆ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಗುಡ್ಡೆ ಹಾಕಲಾಗಿದೆ. ಮತ್ತೊಂದೆಡೆ ಚರಂಡಿಗಳು ತೆರೆದುಕೊಂಡಿದ್ದು, ಮಳೆ ಬಂದರೆ ಪಾದಚಾರಿಗಳು ಅಥವಾ ಬೈಕ್ ಸವಾರರು ಬಿದ್ದು ಪ್ರಾಣಾಪಾಯವಾಗುವ ಸ್ಥಿತಿಯಿದೆ.
ಸ್ಲ್ಯಾಬ್‌ಗಳು ಪಕ್ಕದಲ್ಲೇ ಬಿದ್ದಿವೆ, ಅದನ್ನು ತಂದು ಚರಂಡಿಗೆ ಮುಚ್ಚಲು ಎಂಜಿನಿಯರ್‌ಗಳಿಗೆ ಸಾಮಾನ್ಯ ಜ್ಞಾನ ಬೇಡವೇ? ಇದಕ್ಕೆಲ್ಲ ಮಂತ್ರಿಗಳೇ ಬಂದು ತೋರಿಸಬೇಕೆ? ಸರ್ಕಾರದ ಹಣವಿದೆ, ಎಸ್ಟಿಮೇಟ್‌ನಲ್ಲಿದೆ, ಆದರೂ ಕೆಲಸದಲ್ಲಿ ಶ್ರದ್ಧೆ ಇಲ್ಲದಿದ್ದರೆ ಹೇಗೆ? ನನ್ನ ಕಣ್ಣಿಗೆ ಕಾಣುವ ಸಮಸ್ಯೆಗಳು ಎಂಜಿನಿಯರ್‌ಗಳಿಗೆ ಏಕೆ ಕಾಣುತ್ತಿಲ್ಲ? ಎಂದು ಸ್ಥಳದಲ್ಲಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ತೀವ್ರ ತರಾಟೆ ತೆಗೆದುಕೊಂಡರು.
ಪಾದಚಾರಿ ಮಾರ್ಗಗಳಲ್ಲಿ ಹತ್ತುವ-ಇಳಿಯುವ ಜಾಗಗಳಲ್ಲಿ ವೃದ್ಧರಿಗೆ ಮತ್ತು ವಿಶೇಷಚೇತನರಿಗೆ ಅನುಕೂಲವಾಗುವಂತೆ ಕಾಂಕ್ರೀಟ್ ಸ್ಲೋಪ್‌ಗಳನ್ನು (ಇಳಿಜಾರು) ನಿರ್ಮಿಸಬೇಕು. ವಾಹನಗಳು ಫುಟ್‌ಪಾತ್ ಮೇಲೆ ನುಗ್ಗದಂತೆ ಪ್ರೆಸ್ಡ್ ಕಾಂಕ್ರೀಟ್ ಬೊಲಾರ್ಡ್‌ಗಳನ್ನು ಅಳವಡಿಸಬೇಕು ಹಾಗೂ ಬ್ರಷ್ಡ್ ಕಾಂಕ್ರೀಟ್ ಮೂಲಕ ಫುಟ್‌ಪಾತ್‌ಗಳನ್ನು ಸಮತಟ್ಟಾಗಿಸಬೇಕು ಎಂದು ಸೂಚಿಸಿದರು.
ಮಹೀಂದ್ರಾ ಶೋರೂಂ ಸೇರಿದಂತೆ ಇತರೆ ಕಂಪನಿಗಳ ಜಾಹೀರಾತು ಫಲಕಗಳು ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ರಸ್ತೆ ಜಾಗದಲ್ಲಿ ಅಕ್ರಮವಾಗಿ ನಿಲ್ಲಿಸಿರುವ ಬೃಹತ್ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಸೂಚಿಸಿದರು. ಫುಟ್‌ಪಾತ್ ಮೇಲೆ ಅಪಾಯಕಾರಿಯಾಗಿ ಬಿದ್ದಿರುವ ಬೆಸ್ಕಾಂ (BESCOM) ವಿದ್ಯುತ್ ತಂತಿಗಳು ಹಾಗೂ ಪೈಪ್‌ಗಳ ತೆರವಿಗೆ ಪಾಲಿಕೆ ಅಧಿಕಾರಿಗಳು ಬೆಸ್ಕಾಂ ಜೊತೆ ಕೂಡಲೇ ಜಂಟಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶಿಸಿದರು.
ವೇಗಾ ಸಿಟಿ ಮಾಲ್ ಮುಂಭಾಗದ ಖುಷಿ ಫರ್ಟಿಲಿಟಿ ಸೆಂಟರ್ ಬಳಿ ರಸ್ತೆ ಗುಂಡಿಗಳು ಬಿದ್ದಿರುವುದು, ರಸ್ತೆಯಲ್ಲೇ ಕಟ್ಟಡ ತ್ಯಾಜ್ಯ (ಡೆಬ್ರಿಸ್) ಸುರಿದಿರುವುದು ಹಾಗೂ ಜೆ.ಪಿ. ನಗರ 4ನೇ ಹಂತದ ಮೆಟ್ರೋ ನಿಲ್ದಾಣದ ಬಳಿಯ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. 'ಫ್ರೀಡಂ ಫ್ರಂ ವೇಸ್ಟ್' ಅಡಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಅವಶೇಷಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹುಳಿಮಾವು ಮಾರುತಿ ಪಬ್ಲಿಕ್ ಸ್ಕೂಲ್ ಎದುರು ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಸರಿಯಾಗಿ ಕೆಲಸ ಮಾಡದೆ ಕಸ ಉಳಿದಿರುವುದನ್ನು ಆಕ್ಷೇಪಿಸಿ, ರಸ್ತೆ ಸ್ವಚ್ಛತಾ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ಸೂಚಿಸಿದರು.
ಬನ್ನೇರುಘಟ್ಟ ನೈಸ್ ರಸ್ತೆ - ಗೊಟ್ಟಿಗೆರೆ ಜಂಕ್ಷನ್ ಭಾಗದಲ್ಲಿ ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣದಲ್ಲಿ ಆಗಿರುವ ಲೋಪಗಳನ್ನು ಸಚಿವರು ಸ್ಥಳದಲ್ಲೇ ಪತ್ತೆಹಚ್ಚಿದರು. ಇದು ನಗರದ ಪ್ರಮುಖ ಹೆಬ್ಬಾಗಿಲಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಜಂಕ್ಷನ್ ಆಗಿದೆ. ಇಲ್ಲಿ ರಸ್ತೆಗೆ ಟಾರ್ ಹಾಕದೆ ಬಿಟ್ಟಿರುವುದು ಮತ್ತು ಡ್ರೈನ್ ಅನ್ನು ತಿರುವು (ಕರ್ವ್) ಮಾಡಿ ರಸ್ತೆಯನ್ನು ಅನಗತ್ಯವಾಗಿ ಕಿರಿದುಗೊಳಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಯಾವ ದಾಖಲೆಗಳ ಆಧಾರದ ಮೇಲೆ ಹೀಗೆ ಮಾಡಲಾಗಿದೆ ಎಂದು ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಬದಿಯ ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಿ, ಡಾಂಬರೀಕರಣ ಪೂರ್ಣಗೊಳಿಸಿ ಟ್ರಾಫಿಕ್ ಸರಾಗಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ರವರು, ಮೆಟ್ರೋ ಕಾಮಗಾರಿ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಪೈಪ್‌ಲೈನ್ ಅಳವಡಿಕೆಯಿಂದಾಗಿ ಬನ್ನೇರುಘಟ್ಟ ರಸ್ತೆ ಸಂಪೂರ್ಣ ಹಾನಿಗೊಳಗಾಗಿದೆ. ತಾತ್ಕಾಲಿಕವಾಗಿ ಡಾಂಬರು ಹಾಕಲಾಗುತ್ತಿದ್ದರೂ ಹೆವಿ ಟ್ರಾಫಿಕ್‌ನಿಂದಾಗಿ ರಸ್ತೆ ಹಾಳಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಇಡೀ ಬನ್ನೇರುಘಟ್ಟ ರಸ್ತೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ 'ವೈಟ್ ಟಾಪಿಂಗ್' ಮಾಡಲು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿದ ನಂತರ ಮತ್ತೆ ವ್ಯಾಪಾರಿಗಳು ಅಥವಾ ಖಾಸಗಿಯವರು ಒತ್ತುವರಿ ಮಾಡಿಕೊಳ್ಳದಂತೆ ತಡೆಯಲು ಜಿಬಿಎ ಮತ್ತು ನಗರ ಪೊಲೀಸ್ ಇಲಾಖೆಯ ಸಮನ್ವಯದಲ್ಲಿ ಶೀಘ್ರವೇ 'ಜಂಟಿ ಟಾಸ್ಕ್ ಫೋರ್ಸ್' ರಚಿಸಲಾಗುವುದು ಎಂದು ತಿಳಿಸಿದರು. ಬೀದಿ ದೀಪ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಫುಟ್‌ಪಾತ್ ನಿರ್ವಹಣೆಯಂತಹ ಕನಿಷ್ಠ ಮೂಲಸೌಕರ್ಯಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಬೇಕು, ಇಲ್ಲವಾದಲ್ಲಿ ಕೆಳಹಂತದಿಂದ ಹಿರಿಯ ಅಧಿಕಾರಿಗಳವರೆಗೂ ಕಠಿಣ ಶಿಸ್ತುಕ್ರಮ ಜರಗಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಫೀಲ್ಡ್ ಇನ್‌ಸ್ಪೆಕ್ಷನ್‌ನಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್, ಅಪರ ಆಯುಕ್ತರಾದ ಡಾ. ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು (AEE) ಹಾಗೂ ವಿದ್ಯುತ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.








