ಕರ್ನಾಟಕದಲ್ಲಿ ಮುಂಗಾರು ಋತುವಿನಲ್ಲಿ ಮಳೆಯ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹೆಚ್ಚುವರಿ 23 ತಾಲೂಕುಗಳನ್ನು ಸರ್ಕಾರ ಬರಪೀಡಿತ ತಾಲೂಕುಗಳೆಂದು ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಸೆಪ್ಟೆಂಬರ್ 17, 2026ರಂದು ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಆಗಸ್ಟ್ 27ರಂದು ಹೊರಡಿಸಿದ್ದ ಮೊದಲ ಹಂತದ ಅಧಿಸೂಚನೆಯಲ್ಲಿ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ ಇದೀಗ ಹೆಚ್ಚುವರಿ ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗಿದೆ.
ಉಳಿದ 139 ತಾಲೂಕುಗಳಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವೈಜ್ಞಾನಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದ ಮೇಲೆ 23 ತಾಲೂಕುಗಳನ್ನು ಹೆಚ್ಚುವರಿಯಾಗಿ ಬರಪೀಡಿತ ಎಂದು ಘೋಷಿಸಲಾಗಿದೆ.








