ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವ ಅಭಿವೃದ್ಧಿ ಕಾರ್ಯಗಳನ್ನ ಸಂಪೂರ್ಣವಾಗಿ ಗಾಳಿಗೆ ತೂರಿದ್ದು, ಕೇವಲ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೌದು, ಮಾಧ್ಯಮ ವರದಿಗಳನ್ನ ಉಲ್ಲೇಖಿಸಿ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಜಾಹೀರಾತು ವೆಚ್ಚ ಬರೋಬ್ಬರಿ 473 ಕೋಟಿ ರೂಪಾಯಿ ದಾಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ರಸ್ತೆಗಳ ದುರಸ್ತಿ, ನಿರುದ್ಯೋಗ ನಿರ್ಮೂಲನೆ, ರೈತರ ಸಂಕಷ್ಟ ಪರಿಹಾರ ಹಾಗೂ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಯಂತಹ ಸಮಸ್ಯೆಗಳು ತಾಂಡವವಾಡುತ್ತಿವೆ. ಆದರೆ ಸರ್ಕಾರ ಮಾತ್ರ ಈ ಸಮಸ್ಯೆಗಳನ್ನ ಬಗೆಹರಿಸುವ ಬದಲು, ಪ್ರತಿದಿನ ಸರಾಸರಿ 43 ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಹಣವನ್ನ ಕೇವಲ ಪ್ರಚಾರಕ್ಕಾಗಿ ಸುರಿಯುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
"ಅಭಿವೃದ್ಧಿ ಶೂನ್ಯ, ಪ್ರಚಾರ ಜೋರು. ರಾಜ್ಯ ಸರ್ಕಾರವು ರಸ್ತೆಗಳನ್ನ ನಿರ್ಮಿಸಲು, ಉದ್ಯೋಗ ಸೃಷ್ಟಿಸಲು ಅಥವಾ ರೈತರನ್ನ ಬೆಂಬಲಿಸಲು ಈ ಹಣವನ್ನ ಬಳಸುತ್ತಿಲ್ಲ, ಬದಲಾಗಿ ಕೇವಲ ತನ್ನ ಸ್ವಂತ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಿದೆ" ಎಂದು ಅವರು ಟೀಕಿಸಿದ್ದಾರೆ.
ಬೆಲೆ ಏರಿಕೆ, ರೈತರ ಸಂಕಷ್ಟ ಮತ್ತು ಗುತ್ತಿಗೆದಾರರ ಪರದಾಟ
ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೇವಲ ಪ್ರಚಾರದ ಕಲೆಯನ್ನ ಹೆಚ್ಚು ಮಾಡಿಕೊಂಡಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಹಾಲಿನ ದರ, ಬಸ್ ಪ್ರಯಾಣ ದರ, ವಿದ್ಯುತ್ ಶುಲ್ಕ ಹಾಗೂ ಅಗತ್ಯ ಸೇವೆಗಳ ವೆಚ್ಚ ದಿನೇ ದಿನೇ ಗಗನಕ್ಕೇರುತ್ತಿದೆ.
"ಒಂದೆಡೆ ರೈತರು ಅನಿಶ್ಚಿತತೆ, ಬರಗಾಲ ಮತ್ತು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದಾರೆ. ನಮ್ಮ ಯುವಕರು ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ. ಮತ್ತೊಂದೆಡೆ, ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರು ತಮ್ಮ ನ್ಯಾಯಯುತ ಬಾಕಿ ಹಣಕ್ಕಾಗಿ ಹತಾಶೆಯಿಂದ ಕಾಯುತ್ತಿದ್ದಾರೆ" ಎಂದು ರಾಜ್ಯದ ಪರಿಸ್ಥಿತಿಯನ್ನ ವಿವರಿಸಿದ್ದಾರೆ.
5 ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯ
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಜಾರಿ ಕುರಿತಾಗಿಯೂ ಬಿಜೆಪಿ ನಾಯಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಈ ಯೋಜನೆಗಳು ಇಂದು ಹಣಕಾಸು ಮತ್ತು ಅನುಷ್ಠಾನದ ಸವಾಲುಗಳನ್ನ ಎದುರಿಸುತ್ತಿವೆ. ಸಕಾಲದಲ್ಲಿ ಜನರಿಗೆ ಯೋಜನೆಗಳನ್ನ ತಲುಪಿಸುವ ಬದಲು, ಸರ್ಕಾರವು ತಾನು ನೀಡಿದ ಭರವಸೆಗಳನ್ನ ಕೇವಲ ಜಾಹೀರಾತುಗಳಲ್ಲಿ ತೋರಿಸಲು ಹೆಚ್ಚು ಆಸಕ್ತಿ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
"ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಳಿದರೆ ಆರ್ಥಿಕ ಮುಗ್ಗಟ್ಟಿನ ನೆಪ ಹೇಳುವ ಸರ್ಕಾರಕ್ಕೆ, ಜಾಹೀರಾತು ನೀಡಲು ಮಾತ್ರ ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲವೇ? ಕರ್ನಾಟಕದ ಜನತೆ ಮತ ಹಾಕಿದ್ದು ಇದಕ್ಕಾಗಿಯೇ?" ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.









