ರಿಲೀಸ್ ಆದ ಮೊದಲ ವಾರದಲ್ಲೇ ʻರಾಮಾಯಣʼ (Ramayana) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು, ಈಗ ವಿಶ್ವದಾದ್ಯಂತ ಬರೋಬ್ಬರಿ 1,000 ಕೋಟಿ ರೂ. ಗಡಿ ದಾಟಿ ಹೊಸ ದಾಖಲೆ ಬರೆದಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ನಮ್ಮ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿದೆ.
8ನೇ ದಿನದ ಅಂತ್ಯಕ್ಕೆ ಈ ಸಿನಿಮಾ ವಿಶ್ವಾದ್ಯಂತ ಒಟ್ಟು 1,033.55 ಕೋಟಿ ರೂ.ಗಳಿಸಿದೆ. ಈ ಮೂಲಕ 1,000 ಕೋಟಿ ಕ್ಲಬ್ ಸೇರಿದ 11ನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ರಾಮಾಯಣ’ ಪಾತ್ರವಾಗಿದೆ.
ಇನ್ನು ಭಾರತದಲ್ಲಿ ಈವರೆಗೆ ಚಿತ್ರದ ಒಟ್ಟು (Gross) ಕಲೆಕ್ಷನ್ 676.12 ಕೋಟಿ ರೂ. ಆಗಿದ್ದು, ನಿವ್ವಳ (Net) ಗಳಿಕೆ 565.51 ಕೋಟಿ ರೂ. ತಲುಪಿದೆ.
ನ. 5 ರಂದು ರಿಲೀಸ್ ಆದ ಈ ಸಿನಿಮಾ ಮೊದಲ ದಿನವೇ 64.85 ಕೋಟಿ ಗಳಿಸಿ ಭರ್ಜರಿ ಓಪನಿಂಗ್ ಪಡೆದಿತ್ತು. ವೀಕೆಂಡ್‌ನಲ್ಲಿ ಶನಿವಾರ 69.80 ಕೋಟಿ ಹಾಗೂ ಭಾನುವಾರ 56.15 ಕೋಟಿ ಕಲೆಕ್ಷನ್ ಮಾಡಿತ್ತು. ಸೋಮವಾರ (ನವೆಂಬರ್ 9) ಸಿನಿಮಾ ಕಲೆಕ್ಷನ್‌ನಲ್ಲಿ ದೊಡ್ಡ ಗಳಿಕೆ ಕಂಡುಬಂದಿದ್ದು, ಒಂದೇ ದಿನ ಬರೋಬ್ಬರಿ 107.50 ಕೋಟಿ ರೂ. ಬಾಚಿಕೊಂಡಿತ್ತು. ಮಂಗಳವಾರ 94.10 ಕೋಟಿ, ಬುಧವಾರ 70.65 ಕೋಟಿ ಮತ್ತು ಗುರುವಾರ 53.50 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.
ಇನ್ನು 9ನೇ ದಿನವಾದ ಇಂದು ಬೆಳಗ್ಗಿನ ಶೋಗಳಲ್ಲಿ ಸಿನಿಮಾ ಅಂದಾಜು 91 ಲಕ್ಷ ರೂ. ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಬೆಳಗ್ಗೆ 1,854 ಶೋಗಳು ಪ್ರದರ್ಶನ ಕಂಡಿದ್ದು, ಹಿಂದಿ ವರ್ಷನ್‌ನಿಂದಲೇ 85 ಲಕ್ಷ ರೂ. ಬಂದಿದೆ. ಇನ್ನು ಕನ್ನಡದಿಂದ 3 ಲಕ್ಷ, ತೆಲುಗು 2 ಲಕ್ಷ ಮತ್ತು ತಮಿಳಿನಿಂದ 1 ಲಕ್ಷ ರೂ. ಆರಂಭಿಕ ಗಳಿಕೆಯಾಗಿದೆ. ವೀಕೆಂಡ್ ಹತ್ತಿರ ಇರುವುದರಿಂದ ಸಂಜೆ ಮತ್ತು ರಾತ್ರಿ ಶೋಗಳಲ್ಲಿ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.









