ಧಾರವಾಡದ ರಾಮಾಪುರ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಮಾಜಿ ಶಾಸಕರ ಪುತ್ರ ರಾಜು ಬೋಳಶೆಟ್ಟಿ ಅವರ ಶವವು ಕಾರಿನ ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆಕಸ್ಮಿಕ ಘಟನೆಯೇ ಅಥವಾ ವ್ಯವಸ್ಥಿತ ಸಂಚೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಆರಂಭಿಸಿದ್ದರು.
ಇದೀಗ ಈ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಮಹಿಳೆಯೊಬ್ಬಳೊಂದಿಗಿನ ಅಕ್ರಮ ಹಾಗೂ ಅನೈತಿಕ ಸಂಬಂಧವೇ ಈ ಭೀಕರ ಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳು ರಾಜು ಅವರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನ ಸಮೇತ ಶವವನ್ನು ಅರಣ್ಯದಲ್ಲಿ ಸುಟ್ಟು ಹಾಕಿದ್ದರು ಎಂಬ ಆಘಾತಕಾರಿ ವಿಚಾರ ತನಿಖೆಯಿಂದ ಬಹಿರಂಗವಾಗಿದೆ.
ಈ ಸ್ಫೋಟಕ ಸತ್ಯ ಹೊರಬೀಳುತ್ತಿದ್ದಂತೆಯೇ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು, ಕೊಲೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಕೊಲೆಯ ಹಿಂದಿನ ಸಂಪೂರ್ಣ ಸಂಚು ಮತ್ತು ಈ ಕೃತ್ಯದಲ್ಲಿ ಇನ್ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.









