ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ₹991 ಏರಿಕೆ: ಹೋಟೆಲ್ ಊಟದ ಬೆಲೆ ದುಬಾರಿ ಸಾಧ್ಯತೆ!

ಮೇ 1ರ ಕಾರ್ಮಿಕ ದಿನಾಚರಣೆಯಂದೇ ಹೋಟೆಲ್ ಉದ್ಯಮಿಗಳಿಗೆ ಹಾಗೂ ಹೊರಗಿನ ಆಹಾರ ಪ್ರಿಯರಿಗೆ ತೈಲ ಕಂಪನಿಗಳು ಬಿಗ್ ಶಾಕ್ ನೀಡಿವೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹991 ರಷ್ಟು ಭಾರಿ ಏರಿಕೆ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ಹಾಗೂ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.

ಬೆಂಗಳೂರಿನಲ್ಲಿ ನಿನ್ನೆವರೆಗೆ ₹2,161 ರಷ್ಟಿದ್ದ ವಾಣಿಜ್ಯ ಸಿಲಿಂಡರ್ ಬೆಲೆ ಇಂದಿನಿಂದ ₹3,152 ಕ್ಕೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳಲ್ಲೇ ಇದು ಅತ್ಯಂತ ಗರಿಷ್ಠ ಮಟ್ಟದ ಏರಿಕೆಯಾಗಿದ್ದು, ಫೆಬ್ರವರಿ ಅಂತ್ಯದಿಂದ ಈವರೆಗೆ ಸುಮಾರು ₹1,300ಕ್ಕೂ ಹೆಚ್ಚು ಬೆಲೆ ಹೆಚ್ಚಳವಾದಂತಾಗಿದೆ. ಸಮಾಧಾನಕರ ವಿಷಯವೆಂದರೆ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಇದು ಸಾಮಾನ್ಯ ಕುಟುಂಬಗಳಿಗೆ ಸದ್ಯಕ್ಕೆ ನೆಮ್ಮದಿ ನೀಡಿದೆ.

ವಾಣಿಜ್ಯ ಅನಿಲ ದರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಜಿಗಿತ ಕಂಡಿರುವುದರಿಂದ ಹೋಟೆಲ್ ಉದ್ಯಮ ತತ್ತರಿಸಿದೆ. ಕಾಫಿ, ಟೀ ಸೇರಿದಂತೆ ದಿನನಿತ್ಯದ ತಿಂಡಿ-ತಿನಿಸುಗಳ ಬೆಲೆಯನ್ನು ಶೇ. 10ರಿಂದ 15ರಷ್ಟು ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೋಟೆಲ್ ಉದ್ಯಮಿಗಳಿಗೆ ಈ ಗ್ಯಾಸ್ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಅನಿವಾರ್ಯವಾಗಿ ಗ್ರಾಹಕರ ಮೇಲೆ ಹೊರೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్