ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳ ಫಲಿತಾಂಶ ಮೇ 4ರಂದು ಪ್ರಕಟವಾಗಲಿದ್ದರೂ, ದಕ್ಷಿಣ 24 ಪರಗಣ ಜಿಲ್ಲೆಯ ‘ಫಾಲ್ಟಾ’ (Falta) ಕ್ಷೇತ್ರದ ಫಲಿತಾಂಶ ಮಾತ್ರ ಅಂದು ಹೊರಬೀಳುವುದಿಲ್ಲ. ಚುನಾವಣಾ ಆಯೋಗವು ಈ ಒಂದು ಕ್ಷೇತ್ರದ ಫಲಿತಾಂಶ ಘೋಷಣೆಯನ್ನು ತಡೆಹಿಡಿದಿದ್ದು, ಇಡೀ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಆದೇಶಿಸಿದೆ. ಮತದಾನದ ವೇಳೆ ನಡೆದ ಅಕ್ರಮಗಳು ಮತ್ತು ತಾಂತ್ರಿಕ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಈ ಅನಿವಾರ್ಯ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಫಾಲ್ಟಾ ಕ್ಷೇತ್ರದಲ್ಲಿ ‘ಬಿಗ್ ಟ್ವಿಸ್ಟ್’ ಸಿಕ್ಕಿದ್ದು, ಮತಯಂತ್ರಗಳ (EVM) ಮೇಲೆ ಕೆಲವು ರಾಜಕೀಯ ಪಕ್ಷಗಳ ಚಿಹ್ನೆಗಳ ಬಟನ್‌ಗಳಿಗೆ ಕಪ್ಪು ಅಂಟು ಪಟ್ಟಿ (Black Adhesive Tape) ಹಚ್ಚಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದಾಗಿ ಮತದಾರರು ತಮಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ಚಲಾಯಿಸಲು ಸಾಧ್ಯವಾಗದೆ ಗೊಂದಲಕ್ಕೀಡಾಗಿದ್ದರು. ಇದರೊಂದಿಗೆ ಮತಗಟ್ಟೆಗಳಲ್ಲಿ ಮತದಾರರಿಗೆ ಬೆದರಿಕೆ ಹಾಕಿದ ಮತ್ತು ಅಕ್ರಮವಾಗಿ ಮತ ಚಲಾಯಿಸಿದ ದೂರುಗಳು ಸಾಬೀತಾದ ಹಿನ್ನೆಲೆಯಲ್ಲಿ ಆಯೋಗವು ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.
ಚುನಾವಣಾ ಆಯೋಗದ ಹೊಸ ವೇಳಾಪಟ್ಟಿಯಂತೆ, ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಿಗೆ ಮೇ 21ರಂದು ಮರು ಮತದಾನ ನಡೆಯಲಿದೆ. ಈ ಕ್ಷೇತ್ರದ ಅಂತಿಮ ಫಲಿತಾಂಶವು ಮೇ 24ರಂದು ಪ್ರಕಟವಾಗಲಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಒಂದು ಕ್ಷೇತ್ರದಲ್ಲಿ ಹದಿನೈದು ದಿನಗಳ ನಂತರ ಮತದಾನ ನಡೆಯುತ್ತಿರುವುದು ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಕುತೂಹಲ ಕೆರಳಿಸಿದೆ.









