ಉಗಾಂಡ ದೇಶದಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಆಫ್ರಿಕನ್ ಮೂಲದ ಮಹಿಳೆಯೊಬ್ಬರಲ್ಲಿ ಪ್ರಾಣಾಂತಿಕ ‘ಎಬೋಲಾ’ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದು ನಗರದಲ್ಲಿ ತೀವ್ರ ಆತಂಕ ಮೂಡಿಸಿದೆ. ಜಾಗತಿಕವಾಗಿ ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಎಂದು ಗುರುತಿಸಲ್ಪಟ್ಟಿರುವ ಈ ವೈರಸ್ನ ಶಂಕೆ ವ್ಯಕ್ತವಾಗುತ್ತಿದ್ದಂತೆ, ಆರೋಗ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಡೀ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಆವರಿಸಿದೆ.
ಸೋಂಕಿನ ಲಕ್ಷಣಗಳು ದೃಢಪಡುತ್ತಿದ್ದಂತೆ ಮಹಿಳೆಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯ ವಿಶೇಷ ಐಸೊಲೇಷನ್ ವಾರ್ಡ್ಗೆ ದಾಖಲಿಸಿ ತೀವ್ರ ನಿಗಾದಲ್ಲಿ ಇಡಲಾಗಿದೆ. ಆಕೆಯ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮಹಿಳೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚುವ ಕಾರ್ಯ ಹಾಗೂ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ.
ಎಬೋಲಾ ಅತ್ಯಂತ ವೇಗವಾಗಿ ಹರಡುವ ಮತ್ತು ಹೆಚ್ಚಿನ ಮರಣ ಪ್ರಮಾಣ ಹೊಂದಿರುವ ಸಾಂಕ್ರಾಮಿಕ ರೋಗವಾಗಿರುವುದರಿಂದ, ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿರುವ ಸರ್ಕಾರ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಲು ಸೂಚಿಸಿದೆ. ಬೌರಿಂಗ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗಳಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡಲಾಗಿದೆ.









