ಬೆಂಗಳೂರಿನಲ್ಲಿ ಘೋರ ದುರಂತ: ಗೊರಗುಂಟೆಪಾಳ್ಯದಲ್ಲಿ ಗ್ಯಾಸ್ ಲಾರಿ ಡಿಕ್ಕಿಯಾಗಿ ದಂಪತಿ ಸಾವು

ಬೆಂಗಳೂರಿನ ಹೊರವರ್ತುಲ ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಗ್ಯಾಸ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಲಿಸುತ್ತಿದ್ದ ಗ್ಯಾಸ್ ಲಾರಿಯ ಬ್ರೇಕ್ ಫೇಲ್ ಆದದ್ದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಿಯಂತ್ರಣ ತಪ್ಪಿದ ಲಾರಿಯು ಮುಂಭಾಗದಲ್ಲಿದ್ದ ಕೆಟಿಎಂ (KTM) ಬೈಕ್‌ಗೆ ಹಿಂಬದಿಯಿಂದ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಲಾರಿ ಡಿಕ್ಕಿ ಹೊಡೆಯುತ್ತಿದ್ದಂತೆ ಬೈಕ್‌ನಲ್ಲಿದ್ದ ದಂಪತಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಗ್ಯಾಸ್ ಲಾರಿಯ ಭಾರೀ ಗಾತ್ರದ ಚಕ್ರಗಳು ದಂಪತಿಯ ಮೇಲೆ ಹರಿದಿದ್ದು, ಇಬ್ಬರೂ ಲಾರಿಯ ಚಕ್ರದಡಿ ಸಿಲುಕಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಗೊರಗುಂಟೆಪಾಳ್ಯ ಸಿಗ್ನಲ್ ಬಳಿಯೇ ಈ ಘೋರ ಅಪಘಾತ ನಡೆದಿದ್ದು, ಸ್ಥಳದಲ್ಲಿದ್ದ ಇತರ ವಾಹನ ಸವಾರರು ಹಾಗೂ ಸಾರ್ವಜನಿಕರು ಈ ದೃಶ್ಯವನ್ನು ಕಂಡು ತೀವ್ರ ದಿಗ್ಭ್ರಮೆಗೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದ ಬಳಿಕ ಹೆದ್ದಾರಿಯಲ್ಲಿ ಕೆಲಕಾಲ ಭಾರೀ ವಾಹನ ದಟ್ಟಣೆ ನಿರ್ಮಾಣವಾಗಿತ್ತು. ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದು, ಗ್ಯಾಸ್ ಲಾರಿ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్