ಟಾಕ್ಸಿಕ್ ಸಿನಿಮಾ ರಿಲೀಸ್ ಗಡಿಬಿಡಿಯಲ್ಲಿರುವ ಯಶ್ ಆ ಒತ್ತಡದ ನಡುವೆಯೂ ನಟಿಯೊಬ್ಬರನ್ನು ತಾರಾಮಾರ ಹೊಗಳಿದ್ದಾರೆ. ಹೆಮ್ಮೆ ಅನ್ನೋ ಪದ ನಿಮಗೆ ಬಹಳ ಚಿಕ್ಕದು ಅಂತೆಲ್ಲ ಮಾತಾಡಿದ್ದಾರೆ. ಆ ಮಾದಕ ಸುಂದರಿ ಯಾರು!
ಮಹತ್ವಾಕಾಂಕ್ಷೆಯ ನಟ ಯಶ್ಗೆ ಸಾಮಾನ್ಯದ್ದೆಲ್ಲ ಕಣ್ಣಿಗೆ ಬೀಳುವುದು ಕಡಿಮೆ. ಆದರೆ ಇಷ್ಟ ಆದದ್ದನ್ನು ಯಾವ ಮುಲಾಜೂ ಇಲ್ಲದೆ ತಿಳಿಸುತ್ತಾರೆ. ಹೀಗೆ ಹೇಳೋದ್ರಿಂದ ನನಗೇನು ಲಾಭ ಅಂತೆಲ್ಲ ಯೋಚನೆ ಮಾಡೋದಿಲ್ಲ. ಇಂಥಾ ಪಾಸಿಟಿವ್ ಅಪ್ರೋಚ್ ಅವರನ್ನು ಈ ಮಟ್ಟಿಗೆ ತಂದು ನಿಲ್ಲಿಸಿದೆ ಎಂದು ಬಹಳ ಮಂದಿ ಹೇಳುತ್ತಾರೆ. ಇದೀಗ ಯಶ್ ಬಾಲಿವುಡ್ ನಟಿಯೊಬ್ಬರನ್ನು ಹಾಡಿ ಹೊಗಳಿದ್ದಾರೆ. ಹೆಮ್ಮೆ ಅನ್ನೋ ಪದಕ್ಕಿಂತಲೂ ಹೆಚ್ಚು ನೀವು ಅಂತೆಲ್ಲ ಕೊಂಡಾಡಿದ್ದಾರೆ. ಇದನ್ನು ಕಂಡು ಯಶ್ ಫ್ಯಾನ್ ಕೂಡ ಆಗಿರುವ ನಟಿ ಫುಲ್ ಥ್ರಿಲ್ ಆಗಿದ್ದಾರೆ.
ಯಾರು ಆ ಸುಂದರಿ?
ಅಷ್ಟಕ್ಕೂ ಯಶ್ ಹೀಗೆ ಹಾಡಿ ಹೊಗಳಿದ್ದು ಬಾಲಿವುಡ್ ನಟಿ ಹುಮಾ ಖುರೇಷಿ ಅವರನ್ನು. ಈ ಹುಮಾ ಬಾಲಿವುಡ್ ಸಿನಿಮಾ, ವೆಬ್ಸೀರೀಸ್ ಎಲ್ಲ ಮಾಡಿ ಶಹಭಾಸ್ ಅನಿಸಿಕೊಂಡವರು. ಟಾಕ್ಸಿಕ್ ಸಿನಿಮಾದಲ್ಲಿನ ಐವರು ನಾಯಕಿಯರ ಶೋಧದಲ್ಲಿದ್ದ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ ಕಣ್ಣಿಗೆ ಈ ಬೆಡಗಿ ಬಿದ್ದದ್ದು ಅಚ್ಚರಿ ಏನಲ್ಲ. ಸೋ ಸಿನಿಮಾ ಶೂಟಿಂಗ್ ಶುರುವಾದ ಆರಂಭದಲ್ಲೇ ಹುಮಾ ಪಾತ್ರಕ್ಕೆ ಶೂಟಿಂಗ್ ನಡೆದಿತ್ತು. ಅಂದರೆ ಅವರಿಗೆ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದು ಇದೆ ಅಂತ ನಾವು ಊಹಿಸಬಹುದು.
ಸ್ಮಿತಾ ಪಾಟೀಲ್ಗೆ ಹೋಲಿಕೆ
ಒಂದಿಷ್ಟು ವರ್ಷಗಳ ಕಾಲ ಬಾಲಿವುಡ್ ಸಿನಿಮಾಗಳಲ್ಲಿ, ಕೆಲವೊಂದು ಬೇರೆ ಭಾಷೆ ಚಿತ್ರಗಳಲ್ಲಿ ನಟಿಸುತ್ತ ಬಂದ ಹುಮಾ ವೆಬ್ ಸೀರೀಸ್ ಮೂಲಕ ಸಖತ್ ಪಾಪ್ಯುಲಾರಿಟಿ ಪಡೆದುಕೊಂಡವರು. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಸ್ ಆಫ್ ವಾಸೇಪುರ್ನಲ್ಲಿ ಇವರ ನಟನೆ ನೋಡಿದ ಗೋವಿಂದ ನಿಹಲಾನಿಯಂಥಾ ಖ್ಯಾತ ನಿರ್ದೇಶಕರು ಇವರ ಅಭಿನಯವನ್ನು ಸ್ಮಿತಾ ಪಾಟೇಲ್ ನಟನೆಗೆ ಹೋಲಿಸಿದ್ದರು. ಅನೇಕ ಸಿನಿಮಾ, ವೆಬ್ ಸೀರೀಸ್ಗಳಲ್ಲಿ ಹುಮಾ ನಟಿಸಿದ್ದಾರೆ.
ಸುಪಾರಿ ಹಂತಕಿಯ ಪಾತ್ರ
ಹುಮಾ ಖುರೇಷಿ ಹೊಸ ಸಿನಿಮಾದ ಹೆಸರು 'ಬೇಬಿ ಡು ಡೈ ಡು' ಅನ್ನೋ ವಿಚಿತ್ರ ಹೆಸರಿನಲ್ಲಿದೆ. ಇದರ ವಿಶೇಷ ಅಂದರೆ ಬಹಳ ಸರ್ಪ್ರೈಸಿಂಗ್ ಆಗಿ ಹುಮಾ ಇದರಲ್ಲಿ ಬಾಯಿ ಬರದ, ಕಿವಿ ಕೇಳದ ಸುಪಾರಿ ಹಂತಕಿ ಪಾತ್ರದಲ್ಲಿ ನಟಿಸಿದ್ದಾರೆ. ನಾಚಿಕೇತ್ ಸಮಂತ್ ನಿರ್ದೇಶನದ ಈ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದೆ.
ಸಿನಿಮಾ ಹೈಲೈಟ್ ಏನು?
ಇದರಲ್ಲಿ ಇರೋ ಹೊಸತನ ಅಂದ್ರೆ ಸಾಮಾನ್ಯವಾಗಿ ಹಂತಕರ ಪಾತ್ರವನ್ನು ನಾಯಕರೇ ಮಾಡುವುದು ಜಾಸ್ತಿ. ಇದರಲ್ಲಿ ಹುಮಾ ಸುಪಾರಿ ಹಂತಕಿಯಾಗಿದ್ದಾರೆ. ಅಷ್ಟೇ ಅಲ್ಲ ಕಿವಿ ಕೇಳದ ಮತ್ತು ಮಾತು ಬಾರದ ಹಂತಕಿಯಾಗಿ ನಟಿಸಿದ್ದಾರೆ. ಬಾಲ್ಯದಲ್ಲಿ ನಡೆದ ಒಂದು ದೊಡ್ಡ ದುರಂತ, 'ಬೇಬಿ' (ಹುಮಾ ಖುರೇಷಿ) ಅನ್ನೋ ಈ ಹೆಣ್ಣುಮಗಳನ್ನು ಹಠಾತ್ ಆಗಿ ಒಬ್ಬ ಕ್ರೂರ ಸುಪಾರಿ ಹಂತಕಿ ಆಗಿ ಬದಲಾಯಿಸಿಬಿಡುತ್ತೆ. ಈಕೆ 'ಪಾಪಾ' (ಚಂಕಿ ಪಾಂಡೆ) ಅನ್ನೋ ತಂದೆಯ ಸಮಾನವಾದ ವ್ಯಕ್ತಿಗಾಗಿ ಕೆಲಸ ಮಾಡ್ತಿರುತ್ತಾಳೆ. ಬೇಬಿ ತನ್ನ ಕೆಲಸದಲ್ಲಿ ಸಖತ್ ಶಾರ್ಪ್ ಮತ್ತು ಎಕ್ಸ್ಪರ್ಟ್; ಶೂಟ್ ಮಾಡೋ ಶಕ್ತಿ ಇರೋ ಒಂದು ಸ್ಪೆಷಲ್ ಛತ್ರಿಯೇ ಈಕೆಯ ಮುಖ್ಯ ಅಸ್ತ್ರ!
ಹೀಗಿರುವಾಗ, ಈಕೆಗೆ ಒಬ್ಬ ಒಳ್ಳೆಯ ಹುಡುಗನ (ರಚಿತ್ ಸಿಂಗ್) ಪರಿಚಯ ಆಗುತ್ತೆ. ಆಮೇಲೆ ಆಕೆಗೆ ತಾನು ಅಡಗಿಸಿಟ್ಟಿರೋ ಈ ರಹಸ್ಯ ತುಂಬಾ ದೊಡ್ಡ ಹೊರೆಯಾಗಿ ಕಾಣೋಕೆ ಶುರುವಾಗುತ್ತೆ. ಈ ಕೊಲೆ ಮಾಡೋ ಪ್ರೊಫೆಷನ್ನಿಂದ ಹೇಗಾದ್ರೂ ಮಾಡಿ ಹೊರಬಂದು, ಎಲ್ಲರಂತೆ ತಾನೂ ಒಬ್ಬ ಸಾಮಾನ್ಯ ಮನುಷ್ಯಳಾಗಿ ಬದುಕಬೇಕು ಅಂತಾಳೆ. ಆದ್ರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಯಾಕಂದ್ರೆ, ಆಕೆ ಈಗಾಗಲೇ ಈ ಕತ್ತಲೆ ಜಗತ್ತಿನಲ್ಲಿ ತುಂಬಾ ಆಳಕ್ಕೆ ಇಳಿದುಬಿಟ್ಟಿರುತ್ತಾಳೆ. ಮುಂದೆ ದೊಡ್ಡದೊಂದು ರಕ್ತಪಾತ ಕಾದಿದೆ ಅನ್ನೋದು ಆಕೆಗೆ ಗೊತ್ತಿರುತ್ತೆ.
ಯಶ್ ಹೊಗಳಿದ್ದು ಹೇಗೆ?
ಈ ಸಿನಿಮಾವನ್ನು ನೋಡಿದ ಯಶ್, ' ಸಕ್ಸಸ್ಗೋಸ್ಕರ ಕೆಲವರು ಸುಲಭದ ಹಾದಿ ಆಯ್ಕೆ ಮಾಡುತ್ತಾರೆ. ಆದರೆ ಹುಮಾ ಕಷ್ಟದ ದಾರಿಯನ್ನು ಆರಿಸಿದ್ದಾರೆ. ಸಿನಿಮಾ ನಿರ್ಮಿಸುವುದು ಗ್ಲಾಮರಸ್ ಅಲ್ಲ. ಬಜೆಟ್ಗಳಿಗಾಗಿ ತಡರಾತ್ರಿಯವರೆಗೆ ಕಷ್ಟಪಡಬೇಕಾಗುತ್ತದೆ, ಯಾರೂ ನಂಬದ ಕಥೆಗಾಗಿ ಹೋರಾಡುತ್ತಿರಬೇಕಾಗುತ್ತದೆ, ವಿಷಯಗಳು ಕೈಮೀರಿ ಹೋದಾಗ ಆ ಜವಾಬ್ದಾರಿಯ ಭಾರವನ್ನು ತನ್ನ ಹೆಗಲಿನ ಮೇಲೇ ಹಾಕಿಕೊಳ್ಳಬೇಕಾಗುತ್ತದೆ. ನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಹುಮಾ, ಬೇಬಿ ಡು ಡೈ ಡು ಸಿನಿಮಾವನ್ನು ನಮ್ಮೆಲ್ಲರ ಮುಂದಿಟ್ಟಿದ್ದಾರೆ. ಅವರ ಧೈರ್ಯವನ್ನು ನಾವು ಬೆಂಬಲಿಸಬೇಕು. ಹೆಮ್ಮೆ ಎಂಬ ಪದವನ್ನೂ ಮೀರಿದ ನಟಿ ಅವರು' ಎಂದಿದ್ದಾರೆ.









