ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕು ಎಂಬುದು ಅನೇಕ ಭಾರತೀಯ ವಿದ್ಯಾರ್ಥಿಗಳ ಕನಸು. ಈ ಕನಸನ್ನು ನನಸಾಗಿಸಿಕೊಳ್ಳಲು ಯುಕೆ, ಅಮೆರಿಕಾ ಸೇರಿದಂತೆ ಹಲವು ದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಅಲ್ಲಿನ ದುಬಾರಿ ಜೀವನ ವೆಚ್ಚವನ್ನು ನಿಭಾಯಿಸಲು ಪಾರ್ಟ್ಟೈಮ್ ಕೆಲಸಗಳನ್ನು ಮಾಡುವುದು ಸಾಮಾನ್ಯವಾಗಿದೆ.
ಆದರೆ, ಜೀವನ ನಿರ್ವಹಣೆಗೆ ಆರಂಭಿಸಿದ ಪಾರ್ಟ್ಟೈಮ್ ಕೆಲಸವೇ ಕೆಲವೊಮ್ಮೆ ವಿದ್ಯಾರ್ಥಿಗಳ ಪ್ರಮುಖ ಗುರಿಯಾದ ಶಿಕ್ಷಣ ಮತ್ತು ವೃತ್ತಿ ಬೆಳವಣಿಗೆಯಿಂದ ಅವರನ್ನು ದೂರ ಮಾಡುತ್ತಿದೆ. ಹೆಚ್ಚಿನ ಸಮಯವನ್ನು ಕೆಲಸಕ್ಕೆ ಮೀಸಲಿಡುವುದರಿಂದ ಓದು, ಕೌಶಲ್ಯ ಅಭಿವೃದ್ಧಿ ಹಾಗೂ ಉತ್ತಮ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಈ ಕುರಿತು ಯುಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿ ದ್ರುವಿ ತಮ್ಮ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾರೆ. ಪಾರ್ಟ್ಟೈಮ್ ಕೆಲಸ ಅಗತ್ಯವಾದರೂ, ಅದರ ವ್ಯಾಮೋಹಕ್ಕೆ ಬಿದ್ದು ವಿದೇಶಕ್ಕೆ ಬಂದ ಮೂಲ ಉದ್ದೇಶವನ್ನು ಮರೆಯಬಾರದು ಎಂದು ಅವರು ಸಲಹೆ ನೀಡಿದ್ದು, ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.









