ಬೆಂಗಳೂರು ನಗರದ ಹೊಯ್ಸಳ ನಗರದಲ್ಲಿ ಯುವತಿಯರ ಒಳ ಉಡುಪುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸದ್ದಾಂ ಹುಸೇನ್ ಎಂದು ಗುರುತಿಸಲಾಗಿದ್ದು, ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಈ ವಿಚಿತ್ರ ಕಳ್ಳತನದಿಂದ ಸ್ಥಳೀಯರು ತೀವ್ರ ಆತಂಕಕ್ಕೊಳಗಾಗಿದ್ದರು.
ಮನೆಯ ಬಾಲ್ಕನಿ ಹಾಗೂ ವರಾಂಡಗಳಲ್ಲಿ ಒಣಹಾಕಲಾಗಿದ್ದ ಒಳ ಉಡುಪುಗಳು ಪದೇಪದೇ ನಾಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯರು ಸ್ವತಃ ಹಿಡನ್ ಕ್ಯಾಮೆರಾ ಅಳವಡಿಸಿದ್ದರು. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ ಮತ್ತೊಂದು ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ. ಆರೋಪಿಯು ಕದ್ದ ಬಟ್ಟೆಗಳ ಬದಲಿಗೆ ಮರುದಿನ ಹಳೆಯ ಬಟ್ಟೆಗಳನ್ನು ಅದೇ ಸ್ಥಳದಲ್ಲಿ ಇಟ್ಟು, ಮತ್ತೆ ಹೊಸ ಒಳ ಉಡುಪುಗಳನ್ನು ಕಳವು ಮಾಡುತ್ತಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.









