ನವದೆಹಲಿ: ರಾಷ್ಟ್ರಗೀತೆ ಜನಗಣಮನಕ್ಕೆ ಅವಮಾನ ಅಥವಾ ಅಡ್ಡಿಪಡಿಸಿದರೆ ಶಿಕ್ಷೆ ವಿಧಿಸುವಂತೆಯೇ, ಇನ್ನು ಮುಂದೆ ವಂದೇ ಮಾತರಂ ಗೀತೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ.
ಈ ಸಂಬಂಧ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ವಿಧೇಯಕ-2026 ಅನ್ನು ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಗೃಹ ಸಚಿವ ಅಮಿತ್ ಶಾ ಅವರು ಈ ವಿಧೇಯಕವನ್ನು ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ರಾಜ್ಯಸಭೆಯ ಕಾರ್ಯಸೂಚಿಯಲ್ಲಿ ಸೇರಿಸಿದ್ದಾರೆ.
ವಿಧೇಯಕಕ್ಕೆ ಸಂಸತ್ತಿನ ಉಭಯ ಸದನಗಳ ಅನುಮೋದನೆ ದೊರೆತು, ರಾಷ್ಟ್ರಪತಿಯ ಸಹಿ ದೊರೆತ ಬಳಿಕವೇ ಅದು ಕಾನೂನಾಗಿ ಜಾರಿಗೆ ಬರಲಿದೆ. ಪ್ರಸ್ತುತ ಇದು ವಿಧೇಯಕದ ಪ್ರಸ್ತಾವನೆಯಾಗಿದ್ದು, ಸಂಸತ್ತಿನಲ್ಲಿ ಚರ್ಚೆ ಹಾಗೂ ಅನುಮೋದನೆಯ ಪ್ರಕ್ರಿಯೆ ಬಾಕಿಯಿದೆ.









