ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಪರ-ವಿರೋಧದ ನಡುವೆಯೇ ಮುಂದುವರಿದಿದ್ದು, ಈ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮಹಿಳಾ ಎಇ ಸೇರಿದಂತೆ ಕೆಲ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆ ಮಂಗಳವಾರ ಶಿವಾಜಿನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಶಿವಾಜಿನಗರ, ಚರ್ಚ್ ಸ್ಟ್ರೀಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜಿಬಿಎ ಜೆಸಿಬಿಗಳ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಸ್ಥಳದಲ್ಲಿದ್ದ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗಗಳಲ್ಲಿನ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುತ್ತಿದ್ದರು.
ಪಾದಚಾರಿ ಒತ್ತುವರಿ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿದ ಬಸವರಾಜ್ ಎಂಬ ವ್ಯಕ್ತಿ ಹಾಗೂ ಅವರ ಗ್ಯಾಂಗ್ನಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಬಗ್ಗೆ ದೆಹಲಿಯಲ್ಲಿರುವ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಲ್ಲೆ ಘಟನೆಯನ್ನು ಖಂಡಿಸಿದ್ದಾರೆ.








