ಬೆಂಗಳೂರು ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೂಪನಹಳ್ಳಿ ಸಮೀಪ ಕುಟುಂಬ ಕಲಹದ ಹಿನ್ನೆಲೆ 22 ವರ್ಷದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತೆಯನ್ನು ಪ್ರೇರಣಾ ಎಂದು ಗುರುತಿಸಲಾಗಿದ್ದು, ಕಳೆದ ಒಂದು ವರ್ಷದ ಹಿಂದೆ ವಿನಯ್ ಕುಮಾರ್ ಅವರನ್ನು ವಿವಾಹವಾಗಿದ್ದರು. ವಿನಯ್ ಇಸ್ರೋದಲ್ಲಿ ಉದ್ಯೋಗಿಯಾಗಿದ್ದು, ಪ್ರೇರಣಾ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮದುವೆಯಾದ ಬಳಿಕವೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡುವುದಾಗಿ ಪತಿ ಹಾಗೂ ಅವರ ಕುಟುಂಬ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಬಿಎಸ್ಸಿ ಶಿಕ್ಷಣ ಮುಗಿಯುತ್ತಿದ್ದಂತೆ ಮನೆಯಲ್ಲಿನ ಪರಿಸ್ಥಿತಿ ಬದಲಾಗಿದ್ದು, ಪತಿ ಅತಿಯಾದ ಅನುಮಾನ ವ್ಯಕ್ತಪಡಿಸುತ್ತಿದ್ದರು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆ ದಂಪತಿ ನಡುವೆ ಗಲಾಟೆ ನಡೆದಿದ್ದರಿಂದ ಪ್ರೇರಣಾ ತವರು ಮನೆಗೆ ಬಂದಿದ್ದರು. ಬಳಿಕ ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿ ಮತ್ತೆ ಪತಿಯ ಮನೆಗೆ ಕಳುಹಿಸಲಾಗಿತ್ತು. ಇದೇ ವೇಳೆ ಮಗು ಹೊಂದುವಂತೆ ನಿರಂತರ ಒತ್ತಡ ಹಾಗೂ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ.
ಶುಕ್ರವಾರ (ಜುಲೈ 24) ಬೆಳಗಿನ ಜಾವ ಮನೆಯಲ್ಲಿದ್ದ ವೇಳೆ ಪ್ರೇರಣಾ ಬಾತ್‌ರೂಮ್‌ಗೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.









