ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಪರಿಣಾಮಕಾರಿ ನಿರ್ವಹಣೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ನಗರದಲ್ಲಿ ನೀರಿನ ಸೋರಿಕೆ, ಕಲುಷಿತತೆ ಹಾಗೂ ಆದಾಯ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ಆಧಾರಿತ ನೂತನ ಪೈಲೆಟ್ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಯೋಜನೆಯಡಿ ಸ್ಮಾರ್ಟ್‌ಟೆರಾ, ಸೊಲಿನಾಸ್, ವಿಲ್‌ಗ್ರೋ ಇನ್ನೋವೇಷನ್ಸ್ ಫೌಂಡೇಶನ್ ಹಾಗೂ ಟೈಟಾನ್ ಕಂಪನಿ ಲಿಮಿಟೆಡ್ ಸಂಸ್ಥೆಗಳ ಸಹಯೋಗದಲ್ಲಿ BWSSB ಸುಮಾರು ಒಂದೂವರೆ ವರ್ಷದ ಪೈಲೆಟ್ ಯೋಜನೆ ಜಾರಿಗೊಳಿಸಲಿದೆ. ಮೊದಲ ಹಂತದಲ್ಲಿ ಈ ಯೋಜನೆಯನ್ನು ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ನೀರಿನ ವಿತರಣಾ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ.
ಯೋಜನೆಗೆ ಸಂಬಂಧಿಸಿದಂತೆ ಇಂದು BWSSB ಹಾಗೂ ಪಾಲುದಾರ ಸಂಸ್ಥೆಗಳ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಯೋಜನೆ ಯಶಸ್ವಿಯಾದರೆ ನಗರಾದ್ಯಂತ ವಿಸ್ತರಿಸುವ ಸಾಧ್ಯತೆ ಇದ್ದು, ನೀರಿನ ಸಮರ್ಪಕ ನಿರ್ವಹಣೆ, ಸೋರಿಕೆ ನಿಯಂತ್ರಣ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.









