ಜಪಾನ್‌ನ ದಕ್ಷಿಣ ಭಾಗದ ಕ್ಯುಶು ದ್ವೀಪದಲ್ಲಿರುವ ಕುಮಾಮೊಟೊ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಭಾರೀ ಅನಾಹುತಕ್ಕೆ ಕಾರಣವಾಗಿದೆ. ಆರಂಭಿಕ ವರದಿಗಳ ಪ್ರಕಾರ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಜಪಾನ್ ಪ್ರಧಾನಿ ಸನಾಯೆ ತಕೈಚಿ ತಿಳಿಸಿದ್ದಾರೆ.
ಯುಎಸ್ ಜಿಯೋಲಾಜಿಕಲ್ ಸರ್ವೆಯ ಮಾಹಿತಿ ಪ್ರಕಾರ, ಭೂಕಂಪದ ತೀವ್ರತೆ 6.8 ರಷ್ಟಿದ್ದು, ಭೂಮಿಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ 4:27ಕ್ಕೆ ಸಂಭವಿಸಿದ ಭೂಕಂಪದ ಪರಿಣಾಮ ಹಲವೆಡೆ ಕಟ್ಟಡಗಳು ಕುಸಿದಿದ್ದು, ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ ಸೇತುವೆಗಳು ಹಾನಿಗೊಳಗಾಗಿದ್ದು, ಸರಕು ಸಾಗಣೆ ರೈಲುಗಳ ಬೋಗಿಗಳು ಹಳಿ ತಪ್ಪಿರುವುದಾಗಿ ವರದಿಯಾಗಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಇನ್ನೂ ಪರಿಶೀಲಿಸುತ್ತಿದ್ದು, ಮುಂದಿನ ಕಂಪನಗಳ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕೆಂದು ಸರ್ಕಾರ ಸೂಚಿಸಿದೆ.









