ಗೋಕರ್ಣ: ಆಹಾರ ಹಾಗೂ ನಿದ್ದೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಉತ್ತಮ ನಿದ್ದೆಗೆ ಹಸಿವು ಅಗತ್ಯವಾಗಿದ್ದು, ಸರಿಯಾದ ಆಹಾರ ಸೇವನೆಯಿಂದ ಉತ್ತಮ ನಿದ್ರೆ ಸಾಧ್ಯವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ದೇಹಕ್ಕೆ ಸಂಬಂಧಿಸಿದ ಪ್ರಮುಖ ಉಪಾಂಗಗಳಲ್ಲಿ ಆಹಾರ ಮತ್ತು ನಿದ್ದೆ ಅತ್ಯಂತ ಮಹತ್ವದ್ದಾಗಿವೆ ಎಂದು ಅವರು ತಿಳಿಸಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯ ಅಂಗವಾಗಿ ‘ನಿದ್ದೆಯೆಂಬ ಪೂಜೆ’ ವಿಷಯದ ಕುರಿತು ಅವರು ಆಶೀರ್ವಚನ ನೀಡಿದರು. ನಿದ್ದೆ ಕೇವಲ ಒಂದು ಸಾಮಾನ್ಯ ಅವಸ್ಥೆಯಲ್ಲ, ಅದು ಮಾತೃ ಸ್ವರೂಪಿಣಿ ದೇವಿಯಂತೆ ಎಂದು ವಿವರಿಸಿದರು. ದೈನಂದಿನ ಶ್ರಮವನ್ನು ನಿವಾರಿಸಲು ಹಾಗೂ ದೇಹ ಮತ್ತು ಮನಸ್ಸಿಗೆ ಉಂಟಾಗುವ ಹಾನಿಯನ್ನು ಸರಿಪಡಿಸಲು ನಿದ್ದೆ ಸಹಕಾರಿಯಾಗಿದೆ ಎಂದರು.
ಸಕಾಲದಲ್ಲಿ ದೊರೆಯುವ ನಿದ್ದೆ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೊಸ ಚೈತನ್ಯವನ್ನು ತುಂಬುತ್ತದೆ. ಉತ್ತಮ ನಿದ್ರೆ ಸುಖ, ಆರೋಗ್ಯ ಹಾಗೂ ಜೀವನದಲ್ಲಿ ಹಲವು ರೀತಿಯ ಸಿದ್ಧಿಗಳನ್ನು ನೀಡುತ್ತದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಆದ್ದರಿಂದ ಆರೋಗ್ಯಕರ ಜೀವನಶೈಲಿಯಲ್ಲಿ ಸರಿಯಾದ ಆಹಾರ ಮತ್ತು ಸಮರ್ಪಕ ನಿದ್ದೆಗೆ ಮಹತ್ವ ನೀಡಬೇಕು ಎಂದು ಅವರು ಕರೆ ನೀಡಿದರು.









