ಬೆಂಗಳೂರು: ಕರ್ನಾಟಕದಲ್ಲಿ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಮುಂಬೈನಲ್ಲಿ ನಡೆದ ಎರಡು ದಿನಗಳ ರೋಡ್‌ಶೋ ಹಾಗೂ ಪ್ರಮುಖ ಕಂಪನಿಗಳೊಂದಿಗೆ ನಡೆದ ಸಭೆಗಳು ಯಶಸ್ವಿಯಾಗಿವೆ. ಔಷಧ ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿ ಸಿಪ್ಲಾ ಮತ್ತು ರಾಕೆಟ್ ಇಂಡಿಯಾ ಕಂಪನಿಗಳು ರಾಜ್ಯದಲ್ಲಿ ಒಟ್ಟು ₹300 ಕೋಟಿ ಹೂಡಿಕೆ ಮಾಡಲು ಮುಂದಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಮುಂಬೈನಲ್ಲಿ ಸಚಿವರು ಬ್ಲ್ಯಾಕ್‌ಸ್ಟೋನ್, ಸೇಂಟ್-ಗೋಬಿಯನ್, ಹೊರೈಝಾನ್, ಹೆನ್ಕೆಲ್, ಕೆಇಸಿ ಇಂಟರ್‌ನ್ಯಾಷನಲ್ ಹಾಗೂ ಐಡಿಯಾ ಫೋರ್ಜ್ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇರುವ ಅವಕಾಶಗಳು ಮತ್ತು ಕೈಗಾರಿಕಾ ವಿಸ್ತರಣೆಗೆ ರಾಜ್ಯ ಸರ್ಕಾರ ನೀಡುತ್ತಿರುವ ಸಹಕಾರದ ಕುರಿತು ಚರ್ಚಿಸಲಾಯಿತು.
ಸಿಪ್ಲಾ ಕಂಪನಿಯು ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ತನ್ನ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆಗೆ ₹200 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ. ಇದೇ ವೇಳೆ ಗಿಡಮೂಲಿಕೆ ಆಧಾರಿತ ಪ್ರೋಟೀನ್ ಉತ್ಪಾದನೆಯಲ್ಲಿ ತೊಡಗಿರುವ ರಾಕೆಟ್ ಇಂಡಿಯಾ ಕಂಪನಿಯು ಗೋಕಾಕದಲ್ಲಿರುವ ತನ್ನ ಘಟಕದ ವಿಸ್ತರಣೆಗೆ ₹100 ಕೋಟಿ ಹೂಡಿಕೆ ಮಾಡಲಿದೆ ಎಂದು ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.









