ಸ್ಟಾರ್ ಸುವರ್ಣ ವಾಹಿನಿ ಮತ್ತೊಂದು ಹೊಸ ಕುಟುಂಬ ಕಥಾಹಂದರದ ಧಾರಾವಾಹಿ **'ಆನಂದ ನಿಲಯ'**ವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ಇತ್ತೀಚೆಗೆ ಆರಂಭವಾದ 'ಜೈಲಲಿತಾ' ಹಾಗೂ 'ಮರ್ಯಾದೆ ರಾಮಣ್ಣ' ಧಾರಾವಾಹಿಗಳ ಯಶಸ್ಸಿನ ಬಳಿಕ ಇದೀಗ ಈ ಹೊಸ ಕಥೆ ಸಾಕಷ್ಟು ಕುತೂಹಲ ಮೂಡಿಸಿದೆ. 13 ವರ್ಷಗಳ ಹಿಂದೆ ಪ್ರಸಾರವಾಗಿದ್ದ 'ಆಕಾಶದೀಪ' ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದ ನಟಿ ದಿವ್ಯ ಶ್ರೀಧರ್, ಈ ಧಾರಾವಾಹಿಯ ಮೂಲಕ ಮತ್ತೆ ಸ್ಟಾರ್ ಸುವರ್ಣಕ್ಕೆ ಮರಳುತ್ತಿದ್ದು, 'ಸುಧಾ' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಆನಂದ ನಿಲಯ' ಒಂದು ಅವಿಭಕ್ತ ಕುಟುಂಬದ ಭಾವನಾತ್ಮಕ ಕಥೆಯನ್ನು ಹೇಳುತ್ತದೆ. ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಡೆಸುವ ನಾಲ್ವರು ಸಹೋದರರಾದ ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್ ಅವರ ಬಾಂಧವ್ಯವೇ ಕಥೆಯ ಕೇಂದ್ರಬಿಂದು. ತಮ್ಮಂದಿರಿಗೆ ತಂದೆಯಾಗಿ, ಸ್ನೇಹಿತನಾಗಿ ಮತ್ತು ಮಾರ್ಗದರ್ಶಕನಾಗಿ ನಿಂತಿರುವ ಹಿರಿಯ ಸಹೋದರ ಧರ್ಮ ಕುಟುಂಬದ ಆಧಾರಸ್ತಂಭನಾಗಿರುತ್ತಾನೆ.
ಈ ಕುಟುಂಬದ ಮಹತ್ವದ ಕೊಂಡಿಯಾಗಿರುವ ಧರ್ಮನ ಪತ್ನಿ ಸುಧಾ, ಮನೆಯ ಮಹಾಲಕ್ಷ್ಮಿಯಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೈದುನರನ್ನು ಮಕ್ಕಳಂತೆ ಸಾಕಿ ಸಲಹುವ ಅತ್ತಿಗೆಯಾಗಿ, ಕುಟುಂಬದ ಪ್ರೀತಿ, ತ್ಯಾಗ ಮತ್ತು ಸಂಬಂಧಗಳ ಮೌಲ್ಯವನ್ನು ತೆರೆದಿಡುವ ಈ ಧಾರಾವಾಹಿ ಪ್ರೇಕ್ಷಕರ ಮನಗೆಲ್ಲುವ ನಿರೀಕ್ಷೆ ಮೂಡಿಸಿದೆ.









